ಮೂಲ್ಕಿ: ಬಜ್ಪೆ ಸಮೀಪದ ಪೆರ್ಮುದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಪದವು ಎಂಬಲ್ಲಿ ಅವೈಜ್ಞಾನಿಕವಾಗಿ ಗುಡ್ಡೆ ಅಗೆದು ಸಮತಟ್ಟು ಮಾಡಿದ್ದರಿಂದ ಗುಡ್ಡದ ಮೇಲಿರುವ ಸುಮಾರು 100ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದೆ.
ಮಂಗಳೂರಿನ ಉದ್ಯಮಿಗಳು ಲೇ ಔಟ್ ನಿರ್ಮಾಣಕ್ಕಾಗಿ ಪಡುಪದವಿನಲ್ಲಿ ಸ್ಥಳೀಯರಿಂದ ಸುಮಾರು 5 ಎಕ್ರೆ ಜಾಗ ಖರೀದಿಸಿದ್ದು, ಅದರೊಂದಿಗೆ 2 ಎಕ್ರೆಗೂ ಹೆಚ್ಚಿನ ಕುಮ್ಕಿ ಜಾಗವನ್ನು ಅವೈಜ್ಞಾನಿಕ ರೀತಿಯಲ್ಲಿ ಅಗೆಯಲಾಗಿದೆ.
ಸಮತಟ್ಟು ಮಾಡಿದ ಜಾಗದ ಒಂದು ಬದಿಗುಡ್ಡೆಯಿದ್ದು, ಅದರ ಮೇಲ್ಗಡೆ ಸುಮಾರು 100ಕ್ಕೂ ಅಧಿಕ ಮನೆಗಳು, ತೆಂಗಿನ ಮರ, ಗಿಡಗಳಿದೆ. ಮಳೆಯಿಂದಾಗಿ ಇದೀಗ ಗುಡ್ಡದ ಅಂಚಿನಲ್ಲಿ ಕುಸಿತ ಕಂಡು ಬಂದಿದೆ.
ಇದರಿಂದ ಕೆಲವು ಮನೆಗಳಿಗೆ ಹಾನಿಯಾಗಿದ್ದು ಹಾಗೂ ಹಲವಾರು ಮರಗಳು ಮಣ್ಣಿನಡಿಗೆ ಬಿದ್ದಿದೆ. ಕೆಲವು ಮರಗಳು ಸುಮಾರು 90 ಅಡಿಯಷ್ಟು ಕೆಳಗೆ ಕುಸಿದು ನಿಂತಿದೆ. ಗುಡ್ಡೆಯಲ್ಲಿ ಮನೆಯಿರುವುದರಿಂದ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಸಮತಟ್ಟು ಮಾಡುತ್ತಿದ್ದಲ್ಲಿ ಸಮಸ್ಯೆ ಬರುತ್ತಿರಲಿಲ್ಲ. ಗುಡ್ಡೆ ಕುಸಿಯುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಹೆಚ್ಚಿನ ಕುಸಿತ ಕಂಡು ಬಂದಲ್ಲಿ ಎಲ್ಲಾ ಮನೆಗಳು ನೆಲಸಮವಾಗುವ ಸಾಧ್ಯತೆಯಿದೆ.
ಈ ಬಗ್ಗೆ ಸ್ಥಳೀಯುರ ಪೆರ್ಮುದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಪಂಚಾಯಿತಿ ಸದಸ್ಯರೊಂದಿಗೆ ಭೇಟಿ ನೀಡಿದ ಗ್ರಾ.ಪಂ. ಅಧ್ಯಕ್ಷ ಸಂದೇಶ್ ಪೂಜಾರಿ ಪರಿಶೀಲನೆ ನಡೆಸಿದ್ದು, ಖಾಸಗಿಯವರು ಕುಮ್ಕಿ ಜಾಗವನ್ನು ಅತಿಕ್ರಮಿಸಿದ್ದು ಈ ಬಗ್ಗೆ ಸರ್ವೆ ನಡೆಸಿ ಅತಿಕ್ರಮಣ ನಡೆಸಿದ ಭೂಮಿಯನ್ನು ವಶಪಡಿಸಲಾಗುವುದು. ಅಪಾಯದ ಅಂಚಿನಲ್ಲಿರುವ ಮನೆಗಳಿಗೆ ಹಾನಿಯಾಗದಂತೆ ತಡೆಗೋಡೆಗಳನ್ನು ನಿರ್ಮಿಸಲು ಆದೇಶಿಸಲಾಗುವುದು ಹಾಗೂ ಲೇ ಔಟ್ ನಿರ್ಮಾಣಕ್ಕೆ ಪರವಾನಗಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.