ಮಂಗಳೂರು: ದ.ಕ. ಜಿಲ್ಲೆಯ ಎಲ್ಲ ತಾಲೂಕು ಮತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ ಕೊನೆಯೊಳಗೆ ಸಾರ್ವಜನಿಕ ದೂರು ಸ್ವೀಕಾರ ಹಾಗೂ ಜನಸಂಪರ್ಕ ಸಭೆ ಆರಂಭಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಭಾನುವಾರ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಎಸ್ಪಿ ಡಾ.ಶರಣಪ್ಪ ಇದನ್ನು ತಿಳಿಸಿದರು.
ಹಳ್ಳಿಗರು ಜಿಲ್ಲೆಯಲ್ಲಿ ನಡೆಯುವ ಕುಂದುಕೊರತೆ ಸಭೆಗೆ ಬರಲು ಸಾಧ್ಯವಾಗುವುದಿಲ್ಲ. ಕೆಲವರು ಹಳ್ಳಿಗರ ಹಾದಿತಪ್ಪಿಸುವವರೂ ಇರುತ್ತಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳೇ ಜನರ ಬಳಿ ತೆರಳಿ ಅಹವಾಲು ಸ್ವೀಕರಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ. ಯಾರು ಯಾವುದೇ ವಿಚಾರಕ್ಕೆ ಸಂಬಂಧಿಸಿ ದೂರು ನೀಡಬಹುದು. ಇದಕ್ಕೆ ಪೂರಕವಾಗಿ ಪೊಲೀಸ್ ಜನಸಂಪರ್ಕ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಯಾರು ದೂರು ನೀಡಿದರೂ ಸತ್ಯಾಂಶ ಕಂಡುಬಂದರೆ ಪ್ರಕರಣ ದಾಖಲಿಸುವಂತೆ ಎಲ್ಲ ಸೂಚಿಸಲಾಗಿದೆ. ದೂರು ದಾಖಲಿಸದಿರುವ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನು ದುರುಪಯೋಗ: ಎಸ್‌ಸಿ-ಎಸ್‌ಟಿ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ದುರುಪಯೋಗವಾಗದಂತೆ ಗಮನಿಸಲಾಗುವುದು. ಈ ವಿಚಾರದಲ್ಲಿ ಸಾರ್ವಜನಿಕರು ಕೂಡ ಸಹಕರಿಸಬೇಕು. ಇದರಿಂದ ಅಮಾಯಕರ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಪ್ಪಿಸಬಹುದು. ಈಗಾಗಲೇ ವಿನಾ ಕಾರಣ ದೂರು ನೀಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಆದ್ದರಿಂದ ಅಂಥ ಪ್ರಕರಣಗಳಲ್ಲಿ ಆಳವಾಗಿ ತನಿಖೆ ನಡೆಸಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸರಿಗೆ ಕಾರ್ಯಾಗಾರ: ಕ್ರಿಮಿನಲ್ ಕೇಸ್ ತಿದ್ದುಪಡಿ 2013, ಪೋಕ್ಸೋ ಕಾಯ್ದೆ, ಎಸ್‌ಸಿ ಎಸ್‌ಟಿ ಕಾಯ್ದೆ ತಿದ್ದುಪಡಿ ಪ್ರಕ್ರಿಯೆಯಲ್ಲಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ಇದರಲ್ಲಿ ತೀರ್ಪು ನೀಡಿದೆ. ಇವೆಲ್ಲದರ ಬಗ್ಗೆ ಪೊಲೀಸರಿಗೆ ತಿಳುವಳಿಕೆ ನೀಡಲು ಆಗಸ್ಟ್‌ನಲ್ಲೇ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.
ಶಾಲೆಗೆ ಪೊಲೀಸರು: ಶಾಲಾ ಕಾಲೇಜಿಗೆ ಪೊಲೀಸರು ಇಲಾಖೆ ಸಮವಸ್ತ್ರವಲ್ಲದೆ ಸಾದಾ ಉಡುಪಿನಲ್ಲೂ ಭೇಟಿ ನೀಡಲಿದ್ದಾರೆ. ಹಾಸ್ಟೇಲ್‌ಗೂ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಚರ್ಚೆ ನಡೆಸುವರು. ಪೋಷಕರ, ಶಿಕ್ಷಕರ, ವಿದ್ಯಾರ್ಥಿಗಳ ಜತೆ ಸಭೆ ನಡೆಸಲಿದ್ದಾರೆ. ವಿದ್ಯಾರ್ಥಿನಿಯರಿಗೆ ಸುರಕ್ಷತೆ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು ಎಂದರು.
ಹೆಚ್ಚುವರಿ ಎಸ್ಪಿ ಟಿ.ಪಿ. ಶಿವಕುಮಾರ್ ಇದ್ದರು.