ದಕ್ಷಿಣ ಕನ್ನಡ

'ನೃತ್ಯಯಜ್ಞ' ಇಂದು

ಮಂಗಳೂರು: ನೃತ್ಯ ಭಾರತಿ ಸಂಸ್ಥೆಯಿಂದ 'ನೃತ್ಯ ಯಜ್ಞ' ಭರತನಾಟ್ಯ ಕಾರ್ಯಕ್ರಮ ಆ.5ರಂದು ನಗರದ ಪುರಭವನದಲ್ಲಿ ಜರುಗಲಿದೆ.  ಸಂಜೆ 5.30ಕ್ಕೆ ಶಾಂತಲಾ ಪ್ರಶಸ್ತಿ ವಿಜೇತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್ ಉದ್ಘಾಟಿಸಲಿದ್ದು, ಬಹರೇನ್ ಕನ್ನಡ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ 'ರಜತನೃತ್ಯ' ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಬಹರೇನ್ ಉದ್ಯಮಿ ರಮೇಶ್ ಮಂಜೇಶ್ವರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸಂಚಾಲಕ ನಿತ್ಯಾನಂದ ರಾವ್, ಭರತನಾಟ್ಯ ಕಲಾವಿದೆ ವಿದುಷಿ ಆಸ್ತಿಕ ಶೆಟ್ಟಿ ಪಾಲ್ಗೊಳ್ಳುವರು ಎಂದು ಸಂಸ್ಥೆ ಅಧ್ಯಕ್ಷೆ ಗೀತಾ ಸರಳಾಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾರಂಭ ಬಳಿಕ ಅಮೆರಿಕದಲ್ಲಿ ನೆಲೆಸಿರುವ ಯುವನೃತ್ಯ ಕಲಾವಿದ ಭರತ್‌ರಾಮ್ ಮತ್ತು ನೃತ್ಯ ಭಾರತಿಯ ಶಿಷ್ಯೆ, ಬಾಲಿವುಡ್ ನಟಿ ತನ್ವಿ ರಾವ್‌ರ 'ನವರಸರಾಮ' ಯುಗಳ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಶ್ಮಿ ಚಿದಾನಂದರ ನೃತ್ಯ ಸಂಯೋಜನೆಯ ಈ ಕಾರ್ಯಕ್ರಮವನ್ನು ಆ.30ರಂದು ಅಮೆರಿಕದ ಅಕ್ಕ ಸಂಸ್ಥೆಯಲ್ಲಿ ಪ್ರಸ್ತುತಪಡಿಸಲಾಗಿದೆ ಎಂದರು. ನ.1ರಂದು ಬಹರೈನ್‌ನಲ್ಲಿ ನಡೆಯುವ ವಿಶ್ವ ವಚನ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಗುರು ಗೀತಾ ಸರಳಾಯರಿಗೆ ಬೆಂಗಳೂರಿನ ಜ್ಞಾನಮಂದಿರ ಅಕಾಡೆಮಿ ವತಿಯಿಂದ ಗೌರವ ಅಭಿನಂದನೆ ಏರ್ಪಡಿಸಲಾಗಿದೆ. ನೃತ್ಯ ಭಾರತಿ ಕಲಾವಿದರಿಂದ ಅಲ್ಲಿ ಕಲಾಪ್ರದರ್ಶನ ಏರ್ಪಡಲಿದೆ ಎಂದು ವಿದುಷಿ ರಶ್ಮಿ ಚಿದಾನಂದ್ ತಿಳಿಸಿದರು. ಪದಾಧಿಕಾರಿ ಬಾಲಕೃಷ್ಣ ಸರಳಾಯ, ರಮ್ಯಾ ರಾವ್ ಇದ್ದರು.

ಮುಸ್ಲಿಂ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಅಬುದಾಭಿ ಬ್ಯಾರೀಸ್ ವೆಲ್‌ಫೇರ್ ಫೋರಂ ಆಶ್ರಯದಲ್ಲಿ ಮುಸ್ಲಿಂ ಹೆಣ್ಮಕ್ಕಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನಿಸಲಾಗಿದೆ.  ಅ.18ರಂದು ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ವಿವಾಹ ನೆರವೇರಲಿದ್ದು, ವಧುವಿಗೆ ಚಿನ್ನ ಮತ್ತು ಮದುವೆ ವಸ್ತ್ರ ಖರೀದಿಗೆ ನಗದು, ವರನಿಗೆ ಧನಸಹಾಯ ಮತ್ತು ಮದುವೆ ಖರ್ಚನ್ನು ಭರಿಸಲಾಗುವುದು. ದ.ಕ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳ ಮುಸ್ಲಿಂ ಸಮುದಾಯದವರು ಈ ಯೋಜನೆಯ ಪ್ರಯೋಜನ ಪಡೆಯಬಹುದು.  ಆಯ್ಕೆ ಸಂದರ್ಭ ಅನಾಥ, ವಿಕಲಚೇತನ ಹಾಗೂ ಮದುವೆ ವಯಸ್ಸು ಮೀರಿರುವ ಹೆಣ್ಮಕ್ಕಳ ಮದುವೆಗೆ ಆದ್ಯತೆ ನೀಡಲಾಗುವುದು. ವರಾನ್ವೇಷಣೆಯ ಪೂರ್ತಿ ಹೊಣೆಗಾರಿಕೆ ಅರ್ಜಿದಾರರದ್ದು ಎಂದು ಫೋರಂ ಅಧ್ಯಕ್ಷ ಮಹಮ್ಮದ್ ಆಲಿ ಉಚ್ಚಿಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸಕ್ತರು ವಿವರವಾದ ಅರ್ಜಿಯನ್ನು ಜಮಾತ್ ದೃಢೀಕರಣದೊಂದಿಗೆ ಆ.31ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಕ್ಕೆ 9845054191 ಸಂಪರ್ಕಿಸಬಹುದು ಎಂದರು. ಈ ಫೋರಂ 2008ರಿಂದ ಸಾಮೂಹಿಕ ವಿವಾಹ ಆಯೋಜಿಸುತ್ತಿದೆ ಎಂದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ, ಉಪಾಧ್ಯಕ್ಷ ಮಹಮ್ಮದ್ ರಫೀಕ್, ಮುಖ್ಯ ಸಲಹೆಗಾರ ಬಶೀರ್ ಬಜ್ಪೆ, ಸಂಚಾಲಕ ಉಮರ್ ಯು.ಎಚ್.ಇದ್ದರು.

ಸಮ್ಮೇಳನ: ಕೃಷಿ ಪ್ರಯೋಗ ಅನುಷ್ಠಾನ-ಬದುಕು ವಿಚಾರಗೋಷ್ಠಿ
ಬಂಟ್ವಾಳ: ಕಂಪನಿ ಪ್ರಣೀತ ಸಂಶೋಧನೆಗಳು ಸಬ್ಸಿಡಿ ಸುತ್ತ ಗಿರಕಿ ಹೊಡೆಯುತ್ತಿದೆಯೇ ಹೊರತು ರೈತನ ಅಂಗಳಕ್ಕೆ ಬಂದಿಲ್ಲ. ಕೃಷಿ ಸಂಶೋಧನೆಗಳು ಲ್ಯಾಬ್ ನಾಲ್ಕು ಗೋಡೆಗಳಿಂದ ಹೊರಗೆ ಬಂದ ಉದಾಹರಣೆಗಳೂ ಇಲ್ಲ ಎಂದು ನಾ. ಕಾರಂತ ಪೆರಾಜೆ ಹೇಳಿದರು.  ಪೊಳಲಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಎರಡನೇಯ ದಿನವಾದ ಭಾನುವಾರ ನಡೆದ ಕೃಷಿ ಪ್ರಯೋಗ ಅನುಷ್ಠಾನ- ಬದುಕು ವಿಚಾರಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.  ಕೃಷಿ ಪ್ರಯೋಗಳಿಗೆಲ್ಲಾ ಮೊದಲು ಬಲಿಯಗುತ್ತಿರುವುದು ರೈತನೇ ಎಂದರು. ಡಾ. ಎಲ್.ಸಿ. ಸೋನ್ಸ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಶೋಧನಾ ಕೆಂದ್ರಗಳಲ್ಲಿ ಆದಂತಹ ಪ್ರಯೋಗಗಳನ್ನು ಹೊಲಗಳಲ್ಲಿ ನೇರವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದರು.    ಬೆಳ್ತಂಗಡಿಯ ಅಣ್ಣೆಗೌಡ, ಜಾನಪದ ತಜ್ಞ ಅಂಡಾರು ಗುಣಪಾಲ ಹೆಗ್ಡೆ, ಬೆಟ್ಟಂಪಾಡಿ ತ್ಯಾಂಪ ನೈಕ್ ಇದ್ದರು.  ಗೀತಾ ಎಸ್. ಕೊಂಕೊಡಿ ಸ್ವಾಗತಿಸಿದರು. ಯೋಗೀಶ್ ರೈ ಕೈರೋಡಿ ನಿರೂಪಿಸಿ, ವಂದಿಸಿದರು.

ಕಟೀಲು: 'ಭ್ರಮರವಾಣಿ' ಬಿಡುಗಡೆ
ಮೂಲ್ಕಿ: ಕಟೀಲು ದೇವಳ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ 'ಭ್ರಮರವಾಣಿ'ಯನ್ನು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಬಿಡಗಡೆಗೊಳಿಸಿದರು. ಪ್ರಾಚಾರ್ಯ ಜಯರಾಮ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ 'ಯುಗಪುರುಷ' ಸಂಪಾದಕ ಕೆ. ಭುವನಾಭಿರಾಮ ಉಡುಪ ಹಸ್ತಪ್ರತಿ ಬಿಡುಗಡೆಗೊಳಿಸಿದರು. ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಪ್ರಶಸ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.

ನಾಪತ್ತೆಯಾಗಿದ್ದ ಯುವತಿ ಅತ್ಯಾಚಾರ; ಆರೋಪಿ ವಶಕ್ಕೆ
ಉಪ್ಪಿನಂಗಡಿ: ನಾಪತ್ತೆಯಾಗಿ ಭಾನುವಾರ ಪತ್ತೆಯಾಗಿದ್ದ ಉರುವಾಲು ಗ್ರಾಮದ 20ರ ಹರೆಯದ ಯುವತಿಯನ್ನು ಅತ್ಯಾಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮನೆಯಿಂದ ನಾಪತ್ತೆಯಾಗಿದ್ದ ಆಕೆ, ಪರಿಚಯಸ್ಥರ ಮನೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದಾಗ ಪತ್ತೆಯಾಗಿದ್ದಾಳೆ. ವೈದ್ಯಕೀಯ ತಪಾಸಣೆ ವೇಳೆ ಆಕೆ 7 ತಿಂಗಳ ಗರ್ಭವತಿ ಎಂಬ ವಿಚಾರ ತಿಳಿದು ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಿದಾಗ ಮಾಯಿಲ (36) ಎಂಬಾತ ಅತ್ಯಾಚಾರ ನಡೆಸಿದ್ದಾಗಿ ಅವರು ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಾಯಿಲನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಟ್ಟಿಗೆಯಲ್ಲಿ ಹೊಡೆವೆನಂದ ಗಟ್ಟಿಗಿತ್ತಿ; ಅತ್ಯಾಚಾರ ಮಾಡಲು ಬಂದವ ಪರಾರಿ
ಉಪ್ಪಿನಂಗಡಿ: ಅತ್ಯಾಚಾರ ಮಾಡಲು ಬಂದವನನ್ನು ಕೈಯ್ಯಲ್ಲಿದ್ದ ಕಟ್ಟಿಗೆಯಿಂದ ಹೊಡೆದು ಕೊಲ್ಲುವೆ ಎಂದು ಮಹಿಳೆ ಬೆದರಿಸಿದ ಹಿನ್ನೆಲೆಯಲ್ಲಿ ಆತ ಪರಾರಿಯಾದ ಘಟನೆ ಇಲ್ಲಿಗೆ ಸಮೀಪದ ಶಿಬಾಜೆ ಗ್ರಾಮದಲ್ಲಿ ನಡೆದಿದೆ.
 ಶಿಬಾಜೆ ಸಮೀಪದ ನಿವಾಸಿ 40ರ ಹರೆಯದ ವಿಧವೆ, ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಶಿಬಾಜೆ ಗ್ರಾಮದ ನಿರಾನ ಮನೆ ನಿವಾಸಿ ವಿಶ್ವನಾಥ ಶೆಟ್ಟಿ (45) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ. ಈ ಸಂದರ್ಭ ಬಚ್ಚಲು ಮನೆಯಲ್ಲಿದ್ದ ಮಹಿಳೆ ಕಟ್ಟಿಗೆಯಿಂದ ಹೊಡೆದು ಕೊಲ್ಲುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ, ಜೀವ ಬೆದರಿಕೆಯೊಡ್ಡಿದ ಆರೋಪಿ ಪಲಾಯನ ಮಾಡಿದ್ದಾನೆಂದು ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಯುವಕ ಸೆರೆ
ಸುಳ್ಯ: ಮಡಿಕೇರಿಯಲ್ಲಿ ಯುವತಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿ ಅಲ್ಲಿಂದ ತಪ್ಪಿಸಿ ಊರಿಗೆ ಬಂದಿದ್ದ ಮರ್ಕಂಜದ ಯುವಕನೊಬ್ಬನನ್ನು ಭಾಗಮಂಡಲ ಪೋಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಮಡಿಕೇರಿ ತಾಲೂಕು ಕರಿಕೆ ಎಲ್ಲುಕೊಚ್ಚಿ ಎಂಬಲ್ಲಿಗೆ ಸುಳ್ಯ ಮರ್ಕಂಜದ ಗುಳಿಗನಮೂಲೆಯ ನವೀನಾಕ್ಷ ಎಂಬಾತ ಕೆಲಸಕ್ಕೆಂದು ಹೋಗಿದ್ದ. ಜು.25ರಂದು ಆತ ಕರಿಕೆ ಪೇಟೆಗೆ ಬಂದು ವಾಪಾಸ್ ಕೆಲಸ ಮಾಡುತ್ತಿದ್ದಲ್ಲಿಗೆ ಹೋಗುತ್ತಿದ್ದಾಗ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಅದೇ ರಸ್ತೆಯಲ್ಲಿ ಹೋಗುತ್ತಿದ್ದಳು. ಆಕೆಯನ್ನು ಹಿಂಬಾಲಿಸಿದ ನವೀನಾಕ್ಷ ನಿರ್ಜನ ಪ್ರದೇಶದಲ್ಲಿ ಆಕೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದ. ಇದನ್ನು ಪ್ರತಿಭಟಿಸಿದ ಯುವತಿ ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ರಸ್ತೆಯಲ್ಲಿ ನಡೆದ ವಿಷಯ ತಿಳಿಸಿದಳು. ಮನೆಯವರು ತಕ್ಷಣ ಕರಿಕೆ ಹೊರಠಾಣೆಗೆ ಹೋಗಿ, ಬಳಿಕ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ದಾಖಲಿಸಿದ್ದ ಪೋಲೀಸರು ನವೀನಾಕ್ಷ ಕೆಲಸ ಮಾಡುತ್ತಿದ್ದ ಮನೆಗೆ ಹೋದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಭಾಗಮಂಡಲ ಪೊಲೀಸರು ಮರ್ಕಂಜದ ಆತನ ಮನೆಯಾದ ಗುಳಿಗನಮೂಲೆಗೆ ಹೋದರು. ಅಲ್ಲಿ ಆತ ಇರಲಿಲ್ಲ. ಬಳಿಕ ಆತ ಮರ್ಕಂಜದ ತೇರ್ಥಮಜಲಿನ ತನ್ನ ಸಂಬಂಧಿಕರ ಮನೆಯಲ್ಲಿರುವುದನ್ನು ತಿಳಿದು ಅಲ್ಲಿಂದ ಆತನನ್ನು ಬಂಧಿಸಲಾಗಿದೆ. ಬಳಿಕ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

ಉಜಿರೆ; ಎರಡು ಮನೆಗಳಲ್ಲಿ ಕಳ್ಳತನ
ಬೆಳ್ತಂಗಡಿ: ಉಜಿರೆ ಕಾಲೇಜು ರಸ್ತೆಯಲ್ಲಿರುವ ಅಕ್ಕಪಕ್ಕದ ಎರಡು ಮನೆಗಳಲ್ಲಿ ಯಾರು ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗದು ಹಾಗೂ ಆಭರಣಗಳನ್ನು ಅಪಹರಿಸಿದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಉಜಿರೆ ಕಾಲೇಜು ರಸ್ತೆಯಲ್ಲಿರುವ ಎ.ಎಂ. ರೆಸಿಡೆನ್ಸಿಯ ನಝೀರ್. ಎಸ್ ಹಾಗೂ ಆತನ ಸಹೋದರ ಹೈದರಾಲಿ. ಎಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಹೋದರಿಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈದುಲ್ ಫಿತರ್ ಹಬ್ಬಕ್ಕೆಂದು ನಝೀರ್ ಊರಿಗೆ ಬಂದಿದ್ದರು. ಶನಿವಾರ ಕುಟುಂಬದವರೆಲ್ಲರೂ ಸೇರಿ ಸಕಲೇಶಪುರದ ಸಂಬಂಧಿಕರ ಮನೆಗೆ ತೆರಳಿದ್ದರು. ಸೋಮವಾರ ಹಿಂತಿರುಗಿ ಬಂದಾಗ ಕಳ್ಳತನ ಪ್ರಕರಣ ಬಹಿರಂಗಗೊಂಡಿದೆ. ನಝೀರ್ ಮನೆಯ ಮುಂಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಐದೂವರೆ ಪವನ್ ಚಿನ್ನ, 5 ಸಾವಿರ ನಗದು ಹಾಗೂ ಹೈದರಾಲಿಯ ಹಿಂಬಾಗಿಲ ಬಾಗಿಲು ಮುರಿದು ಒಳನುಗ್ಗಿ 32 ಸಾವಿರ ನಗದು, ಸುಮಾರು 45 ಸಾವಿರ ಮೌಲ್ಯದ ವಾಚ್‌ಗಳನ್ನು ಅಪಹರಿಸಿದ್ದಾರೆ. ಒಟ್ಟು ಸುಮಾರು ರು. 2 ಲಕ್ಷ ರೂ. ಮೌಲ್ಯದ ನಗದು ಹಾಗೂ ಸೊತ್ತುಗಳು ಕಳ್ಳತನವಾಗಿವೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

ಚಿನ್ನಾಭರಣ ತೊಳೆಯುವ ನೆಪದಲ್ಲಿ ವಂಚನೆ ಯತ್ನ
ಉಪ್ಪಿನಂಗಡಿ: ಸಾಬೂನು ಮಾರಾಟ ಮತ್ತು ಚಿನ್ನಾಭರಣದ ಹೊಳಪು ಹೆಚ್ಚಿಸುತ್ತೇವೆ ಎಂದು ನಂಬಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರ ಎಗರಿಸಲು ಯತ್ನಿಸಿದ ಘಟನೆ ಸೋಮವಾರದಂದು ಗೋಳಿತೊಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ನಡೆದಿದೆ. ಕೊಂಕೋಡಿ ನಿವಾಸಿ ಪದ್ಮಯ ಗೌಡ ಎಂಬವರ ಮನೆಗೆ ಹಿಂದಿ ಭಾಷಿಗ ಯುವಕರಿಬ್ಬರು ಸಾಬೂನು ಮಾರಾಟದ ನೆಪದಲ್ಲಿ ಬಂದವರು, ಮನೆ ಮಂದಿಗೆ ಸಾಬೂನು ಬೇಡ ಎಂದಾಗ ಮನೆಯಲ್ಲಿದ್ದ ದೇಜಮ್ಮ ರವರ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹೊಳಪು ಕಳಕೊಂಡಿವಾಗಿದೆ . ಅದನ್ನು ಹೊಳಪು ಭರಿತವನ್ನಾಗಿಸುತ್ತೇವೆ ಎಂದು ನಂಬಿಸಿದರು. ಸಂಶಯದಿಂದಲೇ ಕರಿಮಣಿ ಸರವನ್ನು ಯುವಕರ ಕೈಗಿತ್ತ ದೇಜಮ್ಮ ಸರದ ತಾಳಿಯನ್ನು ತನ್ನ ಕೈಯಲ್ಲೇ ಇರಿಸಿ, ಸರ ಹೊಳಪುಯುಕ್ತವಾಗುವುದನ್ನು ಕುತೂಹಲದಿಂದ ನೋಡುತ್ತಿದ್ದರು. ಆದರೆ ಸರ ಹೊಳಪುಗೊಳ್ಳುವ ಬದಲು ಕಪ್ಪಾಗಿ ರೂಪಾಂತರ ಹೊಂದಿದಾಗ ವಂಚನೆಗೆ ಒಳಗಾದ  ಅರಿವಾಗಿ ಬೊಬ್ಬೆ ಹೊಡೆದರು. ಮಹಿಳೆಯ ಬೊಬ್ಬೆ ಕೇಳಿ ಚಿನ್ನದ ಸರವನ್ನು ಅಲ್ಲೇ ಬಿಟ್ಟು ಪಲಾಯನಗೈದ ಯುವಕರನ್ನು ಸ್ಥಳಿಯರು ಹುಡುಕಾಡಿದರೂ ಯುವಕರು ಪತ್ತೆಯಾಗಲಿಲ್ಲ. ಇತ್ತ ಗೋಳಿತೊಟ್ಟಿನಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನೇರಿದ ಹಿಂದಿ ಭಾಷಿಗ ಯುವಕರನ್ನು ಸ್ಥಳೀಯರು ಮತ್ತು ಪೊಲೀಸರು ವಶಕ್ಕೆ ತೆಗೆದುಕೊಂಡರೂ, ಅವರಲ್ಲಿ ಸಾಬೂನು ಆಗಲಿ, ಚಿನ್ನಾಭರಣ ಕರಗಿಸುವ ವಸ್ತುಗಳಾಗಲಿ ಇಲ್ಲದಿರುವುದನ್ನು ಮನಗಂಡು ಬಿಟ್ಟುಬಿಟ್ಟರು.

ಹೇರೂರು ಪದ್ಮನಾಭ ಶೆಟ್ಟರ ಆಂಗ್ಲ ಕೃತಿ ಲೋಕಾರ್ಪಣೆ
ಮಂಗಳೂರು: ಸಮಾಜದೊಂದಿಗೆ ಬಾಳುವುದೇ ಭಾರತೀಯ ಸಂಸ್ಕೃತಿ. ಸಮಾಜದಲ್ಲಿ ಕೂಡುಕುಟುಂಬ ಬದುಕು ಉತ್ತಮವಾದ್ದು ಎಂದು ಹಿರಿಯ ಸಾಹಿತಿ ಏರ್ಯ ಡಾ. ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ. ನಗರದ ಟಿ.ವಿ.ರಮಣ ಪೈ ಹಾಲ್‌ನಲ್ಲಿ ಭಾನುವಾರ ಹೇರೂರು ಪದ್ಮನಾಭ ಶೆಟ್ಟಿ ಅವರ 'ಎ ಟ್ರೂ ಟ್ರೆಷರ್ ಆಫ್ ರೀಡಿಂಗ್ ಪ್ಲೆಶರ್‌' ಸಂಪಾದಿತ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇದೊಂದು ಆಂಗ್ಲ ಭಾಷೆಗಳ ಲೇಖನ ಸಂಗ್ರಹ. ತಲೆಬರಹವನ್ನೇ ಕಾವ್ಯಾತ್ಮಕವಾಗಿ ಹೇಳಿದ್ದಾರೆ ಲೇಖಕರು. ಇಂಥ ಕಾವ್ಯಾತ್ಮಕ ಬರಹ ಪುಸ್ತಕದುದ್ದಕ್ಕೂ ಇದೆ.  ತಾನು ಅನುಭವಿಸಿದ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು. ಎಲುಬು ತಜ್ಞ ಡಾ.ಶಾಂತಾರಾಮ ಶೆಟ್ಟಿ ಮಾತನಾಡಿ, ಪದ್ಮನಾಭ ಶೆಟ್ಟರದು ಸರಳ ಬದುಕು. ಈವರೆಗೆ ಮೂರು ಪುಸ್ತಕ ಪ್ರಕಟಗೊಂಡಿದೆ. ಇವರ ವ್ಯಕ್ತಿತ್ವ, ಘನತೆ ಸಮುದಾಯದ ಯುವಜನತೆಗೆ ಮಾದರಿಯಾಗಿದೆ ಎಂದರು. ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ, ಕೂಡುಕುಟುಂಬದ ಬದುಕು ಬಿಟ್ಟ ಮೇಲೆ ಬಂಟ ಸಮುದಾಯದಲ್ಲಿ ಬದಲಾವಣೆ ಆಗಿದೆ. ಆದರೆ ಎಲ್ಲರೊಂದಾಗಿ ಬದುಕುವುದೇ ಶ್ರೇಯಸ್ಕರ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT