ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ಗುಡ್ಡ ಕುಸಿತ ಇದೀಗ ಮತ್ತೆ ಪುನರಾರಂಭಗೊಂಡಿದೆ. ಪರಿಣಾಮ ಒಂದೆರಡು ಮನೆಗಳು ಕುಸಿಯುವ ಭೀತಿಯಲ್ಲಿದೆ.
ವ್ಯಾಪಕ ಮಣ್ಣು ಅಗೆತದಿಂದಾಗಿ ಕುಸಿಯುವ ಸಾಧ್ಯತೆಯಲ್ಲಿದ್ದ ಎತ್ತರದ ಈ ಗುಡ್ಡ ನಿರೀಕ್ಷೆಯಂತೆ ವಿಶಾಲವಾಗಿ ಬಿರುಕು ಬಿಟ್ಟು ಕುಸಿತಕ್ಕೊಳಗಾಗಿದ್ದು ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಖಾಸಗಿ ಉದ್ಯಮಿಗಳು ಈ ಗುಡ್ಡದ ಮಣ್ಣು ಅಗೆದು ಸಮತಟ್ಟು ಮಾಡುವ ಸಂದರ್ಭದಲ್ಲೇ ಪುರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮವಾಗಿ ಇದೀಗ ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭೂ ಮಾಲೀಕರು ಭರವಸೆ ನೀಡಿದ್ದರೂ ಇದುವರೆಗೆ ಈಡೇರಿಲ್ಲ ಎಂದು ಸಂತ್ರಸ್ತರು ಆರೋಪಿಸಿದರು.
ಸೋಮವಾರ ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಬಿಜೆಪಿ ಮುಖಂಡರಾದ ಜಿ. ಆನಂದ, ತುಂಗಪ್ಪ ಬಂಗೇರ, ಮುಖ್ಯಾಧಿಕಾರಿ ಮತ್ತಡಿ ಹಾಗೂ ಎಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಭೂ ಮಾಲೀಕರು ವ್ಯವಸ್ಥೆ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪುರಸಭೆ ಹೊಣೆಯಲ್ಲ: ಕಲ್ಲಗುಡ್ಡೆಯಲ್ಲಿ ಭೂ ಕುಸಿತಕ್ಕೆ ಪುರಸಭೆ ಹೊಣೆಯಲ್ಲ. ಖಾಸಗಿ ಭೂ ಮಾಲೀಕರ ಎಡವಟ್ಟಿನಿಂದಾದ ಸಮಸ್ಯೆ. ಇದಕ್ಕೆ ಅವರೇ ಜವಾಬ್ದಾರರು ಎಂದು ಪುರಸಭಾಧ್ಯಕ್ಷೆ ವಸಂತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ ಅವರು, ಭೂಮಾಲೀಕರೊಂದಿಗೆ ಸಂತ್ರಸ್ತರ ಉಪಸ್ಥಿತಿಯಲ್ಲೇ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ಭೂಮಾಲೀಕರು ಸಂತ್ರಸ್ತರು ತಾತ್ಕಾಲಿಕ ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡುವುದಾದರೆ ಅದರ ಬಾಡಿಗೆ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದರು. ಪ್ರಾಕೃತಿಕ ವಿಕೋಪದಡಿ ಗುಡ್ಡ ಜರಿತಕ್ಕೆ ತಡೆಗೋಡೆ ನಿರ್ಮಿಸುವಂತೆ ಭೂ ಮಾಲೀಕರು ಯಾವುದೇ ಪ್ರಸ್ತಾವನೆ, ಮನವಿ ಸಲ್ಲಿಸಿಲ್ಲ. ತಡೆಗೋಡೆಯನ್ನು ಭೂ ಮಾಲೀಕರೇ ನಿರ್ಮಿಸಬೇಕಿದೆ ಎಂದರು.