ಮಂಗಳೂರು: ಶರಣ ಸಾಹಿತ್ಯ ವಿಶ್ವ ಸಂವಿಧಾನವಾದರೆ, ವಚನ ಸಾಹಿತ್ಯ ಬದುಕಿನ ಸಂವಿಧಾನ. ಇದರ ತಿದ್ದುಪಡಿ ಅಸಾಧ್ಯ. ಇದನ್ನು ತಿಳಿದುಕೊಂಡರೆ ಉತ್ತಮ ಬದುಕು ರೂಪಿಸಲು ಸಾಧ್ಯ ಎಂದು ಬಸವ ವೇದಿಕೆ ಸಂಸ್ಥಾಪಕ ಡಾ.ಸಿ.ಸೋಮಶೇಖರ ಹೇಳಿದ್ದಾರೆ.
ಬೆಂಗಳೂರಿನ ಶ್ರೀಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಭಾನುವಾರ 3ನೇ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ನಡೆದಷ್ಟು ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕ್ರಾಂತಿ ನಂತರ ಎಲ್ಲಿಯೂ ಆಗಿಲ್ಲ. ವಚನ ಸಾಹಿತ್ಯದಲ್ಲಿ ಮಾನವ ಧರ್ಮ, ಪ್ರೀತಿ, ಅಂತಃಕರಣ, ಶುದ್ಧ ಮನೋಭಾವ ಇದೆ. ಶರಣರು ಬದ್ಧತೆಯಿಂದ ಸ್ವಾವಲಂಬಿಯಾಗಿ ಬದುಕುವವರು. ಶರಣ ತತ್ವದಲ್ಲಿ ನಂಬಿಕೆ ಇರಿಸಿ ಆಡಳಿತ ನಿರ್ವಹಿಸಿದರೆ ಎಲ್ಲರೂ ಒಳ್ಳೆಯದಾಗುತ್ತಾರೆ ಎಂದರು.
ಹಂಪಿ ಶ್ರೀಗಾಯತ್ರಿ ಪೀಠದ ಶ್ರೀದಯಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಮ್ಮೇಳನ ಉದ್ಘಾಟಿಸಿ, ಶರಣರ ತತ್ವ ಅನುಸರಿಸುವಂತೆ ಕರೆ ನೀಡಿದರು.
ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಶಿಕ್ಷಣ ಕೈಪಿಡಿ ಪುಸ್ತಕ ಬಿಡುಗಡೆ ಮಾಡಿದರು.
ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತ ಹಗರಿ ಮಂಜುನಾಥ ರೈ(ಸಮಾಜ ಸೇವೆ) ಮುಂಬೈ, ಸುಬ್ಬಯ್ಯ ಎ.ಶೆಟ್ಟಿ (ಸಮಾಜ ಕಲ್ಯಾಣ) ಮುಂಬೈ, ವಿದುಷಿ ರಶ್ಮಿ ಚಿದಾನಂದ್(ಭರತನಾಟ್ಯ), ಸೀತಾರಾಮ ಶೆಟ್ಟಿ ಬನ್ನೂರು(ಕನ್ನಡ ಸೇವೆ)ಇವರನ್ನು ಸನ್ಮಾನಿಸಲಾಯಿತು.