ದಾವಣಗೆರೆ: ಶುಭ ಸಂಕೇತವಾದ ತೆಂಗಿನಕಾಯಿ ಕೆಜೆಪಿ ಪಕ್ಷದ ಚಿಹ್ನೆಯಾಗಿ ಲಭಿಸಿದೆ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ತಾವೇ ಎಂದು ದೆಹಲಿಯಿಂದ ಕೇಂದ್ರ ಚುನಾವಣಾ ಆಯೋಗ ಈಗ ಕಳುಹಿಸಿರುವ ಇ- ಮೇಲ್ನಲ್ಲಿ ತಿಳಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಲ್ಲಿ ಸಂತಸ ವ್ಯಕ್ತಪಡಿಸಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಕೆಜೆಪಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗ ಕಳೆದ ವಾರವಷ್ಟೇ ಕೆಜೆಪಿ ರಾಜ್ಯಾಧ್ಯಕ್ಷ ನಾನು ಎಂಬುದಾಗಿ ತಿಳಿಸಿತ್ತು. ಇಂದು ಇ- ಮೇಲ್ ಕಳುಹಿಸಿದೆ. ಇದರಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದರು.
ನನ್ನ ಸ್ಥಿತಿ ಅರ್ಥ ಮಾಡಿಕೊಳ್ಳಿ: ಯಡಿಯೂರಪ್ಪನ ಪರಿಸ್ಥಿತಿಯನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ನನಗಾದ ದ್ರೋಹವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಕೆಜೆಪಿಯನ್ನು ಬಲಪಡಿಸಬೇಕು. ಬಿಜೆಪಿಯಲ್ಲಿದ್ದಾಗ ಅದೇ ಪಕ್ಷದಲ್ಲಿ ಇದ್ದವರೆ ನನಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿ ಬಗೆದರು. ಪಕ್ಷದ ಒಳಗಿದ್ದವರಿಂದಲೇ ನನಗೆ ಅನ್ಯಾಯವಾಯಿತು ಎಂದರು.
ಕೆಜೆಪಿ ಶ್ರೀಮಂತರ ಪಕ್ಷವಲ್ಲ, ಬಡವರ ಪಕ್ಷವಾಗಿದೆ. ಸಭೆ, ಸಮಾರಂಭದಲ್ಲಿ ಹಾರ, ತುರಾಯಿಗೆ ಹಣ ಖರ್ಚು ಮಾಡದೆ, ಅದೇ ಹಣವನ್ನು ಚುನಾವಣೆ ವೆಚ್ಚಕ್ಕೆ ಪಕ್ಷದ ಜಿಲ್ಲಾ ಸಂಚಾಲಕರ ಬಳಿ ಕೊಡಿ. ಯುವ ಶಕ್ತಿ ಮನಸ್ಸು ಮಾಡಿದರೆ ಬದಲಾವಣೆ ತರಬಹುದು. ದಾವಣಗೆರೆ ಪಾಲಿಕೆ 41 ವಾರ್ಡ್ನಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಪಕ್ಷದ ಅಭ್ಯರ್ಥಿಗಳು ಜನರ ಸಮಸ್ಯೆ ಬಗ್ಗೆ, ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ನಗೆಪಾಟಲಾದೀತು: ಪಕ್ಷದ ಅಭ್ಯರ್ಥಿಗಳನ್ನು ನೀವು ಗೆಲ್ಲಿಸಿದಾಗ ಮಾತ್ರ ನಾನು ತಲೆ ಎತ್ತಿ ಓಡಾಡಲು ಸಾಧ್ಯ. ಇಲ್ಲದಿದ್ದರೆ, ನಗೆಪಾಟಿಲಿಗೆ ಗುರಿಯಾಗಬೇಕಾಗುತ್ತದೆ ಎಂಬುದೂ ನಿಮಗೆ ಅರಿವಿರಲಿ. ಪ್ರತಿಯೊಬ್ಬ ಕಾರ್ಯಕರ್ತರೂ ಇಂತಹ ಸೂಕ್ಷ್ಮ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಬಿ.ಪಿ. ಹರೀಶ, ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ, ಮುಖಂಡರಾದ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ, ವಿಪ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ, ರಾಜ್ಯ ಸಂಚಾಲಕ ಬಿ.ಕೆ. ಸೈಯದ್, ಕೆ. ಹೇಮಂತಕುಮಾರ, ಎನ್.ಜಿ. ಪುಟ್ಟಸ್ವಾಮಿ, ಚಂದ್ರಾ ನಾಯ್ಕ, ಅಮೀರಾಬಾನು, ಕೆ.ಪಿ. ಕಲ್ಲಿಂಗಪ್ಪ, ಸುರೇಂದ್ರಪ್ಪ, ಸೈಯದ್ ಶಾಹೀನ್, ಮಟ್ಟಿಕಲ್ಲು ವೀರಭದ್ರಸ್ವಾಮಿ, ನಾಗರಾಜ ಶಿರಮಗೊಂಡನಹಳ್ಳಿ, ರೇಣುಕಾಪ್ರಸಾದ, ಸೀಮಾ ಸತೀಶ, ಪರಶುರಾಮನಾಯ್ಕ, ಮಂಜುನಾಥ, ವೀಣಾ ಇತರರು ಇದ್ದರು.