- ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ವಿಧಾನಸಭಾ, ಲೋಕಸಭಾ ಚುನಾವಣೆ ವೇಳೆ ಮತದಾರರಿಗೆ ಹಣ, ಹೆಂಡ ಸೇರಿದಂತೆ ವಿವಿಧ ವಸ್ತುಗಳ ಆಶೆ, ಆಮೀಷ ಒಡ್ಡುವುದು ಸಾಮಾನ್ಯ ಸಂಗತಿ. ಆದರೆ ಚುನಾವಣೆಯನ್ನೇ ನಡೆಸದೆ ಹರಾಜಿನ ಮೂಲಕ ಸದಸ್ಯ ಸ್ಥಾನ ಮಾರಾಟ ಮಾಡುವುದು ಯಾವ ಪದ್ಧತಿ?.
4.40 ಲಕ್ಷಕ್ಕೆ ಹರಾಜು: ಇದಕ್ಕೊಂದು ಉದಾಹರಣೆ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಶಾಪುರ ಗ್ರಾಮದಲ್ಲಿ ಜರುಗಿದೆ. ಇಲ್ಲಿ ಗ್ರಾ.ಪಂ. ಸದಸ್ಯ ಸ್ಥಾನವನ್ನು ರು. 4.40 ಲಕ್ಷಕ್ಕೆ ಹರಾಜು ಮಾಡಲಾಗಿದೆ.
ಫೆ.17 ರಂದು ಹಾರಕನಾಳು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದೆ. ಈ ಪಂಚಾಯ್ತಿ ವ್ಯಾಪ್ತಿಗೆ 7 ಹಳ್ಳಿಗಳು ಒಳಪಡುತ್ತವೆ, ಒಟ್ಟು 18 ಸ್ಥಾನಗಳು ಇವೆ. ಅದರಲ್ಲಿ ಈಶಾಪುರ ಗ್ರಾಮವೂ ಸೇರಿದೆ.
ಈಶಾಪುರ 100 ಮನೆಗಳುಳ್ಳ ಪುಟ್ಟ ಗ್ರಾಮ. 325 ಮತದಾರರಿದ್ದಾರೆ. ಈ ಗ್ರಾಮದಲ್ಲಿ ಒಂದೇ ಒಂದು ಸ್ಥಾನವಿದೆ. ಅದು ಪರಿಶಿಷ್ಟ ಪಂಗಡ(ಎಸ್ಟಿ) ಕ್ಕೆ ಮೀಸಲಾಗಿದೆ. ಫೆ.4 ರಂದು ಸೋಮವಾರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನ.
ಹಣ ದೇವಸ್ಥಾನಕ್ಕೆ: ಈ ಸಂದರ್ಭದಲ್ಲಿ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದವರು ಇದ್ದು, ನಾಮಪತ್ರ ಸಲ್ಲಿಸಲು ಹಲವರು ಮುಂದಾಗಿದ್ದಾರೆ. ಇದೇ ಗ್ರಾಮದಲ್ಲಿ ಅಂದಾಜು ರು. 20 ಲಕ್ಷ ವೆಚ್ಚದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣ ಹಂತದಲ್ಲಿದ್ದು ಇದರ ವೆಚ್ಚ ಬರಿಸಲು ಚುವಾಣೆಗೆ ತಳುಕುಹಾಕಲಾಗಿದೆ.
ದೇವಸ್ಥಾನಕ್ಕೆ ಈಗಾಗಲೇ 5 ಲಕ್ಷ ರು.ಗಳು ಮುಜರಾಯಿ ಇಲಾಖೆಯಿಂದ ಮಂಜೂರಾಗಿದೆ. ಉಳಿದ ಹಣ ಎಲ್ಲಿಂದ ಹೊಂದಿಸಬೇಕು ಎಂದು ಚಿಂತಿಸುತ್ತಿರುವಾಗ ಗ್ರಾಮ ಪಂಚಾಯ್ತಿ ಚುನಾವಣೆ ಎದುರಾಗಿದೆ. ಊರ ಪ್ರಮುಖರು ಸಭೆ ಸೇರಿ ಇರುವ ಒಂದು ಪಂಚಾಯ್ತಿ ಸ್ಥಾನವನ್ನು ಹರಾಜು ಮಾಡಿ ಬರುವ ಹಣ ದೇವಸ್ಥಾನ ನಿರ್ಮಾಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿದರು.
ಹರಾಜಿಗೆ ನಿರ್ಣಯ: ಚುನಾವಣೆಗೆ ಸ್ಪರ್ಧಿಸುವವರು ಹರಾಜಿನಲ್ಲಿ ಪಾಲ್ಗೊಳ್ಳಬೇಕು, ಅತಿ ಹೆಚ್ಚು ಹಣ ಕೂಗಿದವರನ್ನು ಆಯ್ಕೆ ಮಾಡುತ್ತೇವೆ. ಅವರ ವಿರುದ್ಧ ಇತರ ಯಾರು ನಾಮಪತ್ರ ಸಲ್ಲಿಸಬಾರದು ಎಂದು ನಿರ್ಣಯಿಸಲಾಯಿತು.
ಆ ಪ್ರಕಾರ ಈಚೆಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಅದರಲ್ಲಿ ಬಿಜೆಪಿ ಪಕ್ಷದ ಹೊಳಲು ಹಾಲೇಶ್ -2.20 ಲಕ್ಷ ರು.ಗಳಿಗೆ, ಬಿಜೆಪಿಯ ಅಳ್ಳಳ್ಳಿ ಹನುಮಂತಪ್ಪ - 3.70 ಲಕ್ಷ ರು.ಗಳಿಗೆ, ಕಾಂಗ್ರೆಸ್ ಪಕ್ಷದ ಪೂಜಾರ ಮಂಜಪ್ಪ - 4.30 ಲಕ್ಷ ರು.ಗಳಿಗೆ ಹಾಗೂ ಬಿಜೆಪಿಯ ಚೂರಿ ಬಸವರಾಜ - 4.40 ಲಕ್ಷ ರು.ಗಳಿಗೆ ಹರಾಜಿನಲ್ಲಿ ಕೂಗಿದರು.
ಅವಿರೋಧ ಆಯ್ಕೆ: ಅಂತಿಮವಾಗಿ 4.40 ಲಕ್ಷ ರು.ಗಳಿಗೆ ಕೂಗಿದ ಬಿಜೆಪಿಯ ಚೂರಿ ಬಸವರಾಜ ಅವರನ್ನು ತಮ್ಮ ಗ್ರಾಮದಿಂದ ಹಾರಕನಾಳು ಗ್ರಾಮ ಪಂಚಾಯ್ತಿ ಸದಸ್ಯನಾಗಿ ಅವಿರೋಧವಾಗಿ ಕಳಿಸಲು ನಿರ್ಣಯ ಕೈಗೊಳ್ಳಲಾಯಿತು. ಫೆ.4 ರಂದು ಸೋಮವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದು, ಫೆ.3 ರಂದು ಭಾನುವಾರ ಚೂರಿ ಬಸವರಾಜನಿಂದ ಹರಾಜಿನ ಮೊತ್ತ 4.40 ಲಕ್ಷ ರು. ಪಡೆದು ನಾಮಪತ್ರ ಸಲ್ಲಿಸಲು ಕಳಿಸಲು ಮುಖಂಡರು ತೀರ್ಮಾನಿಸಿದ್ದಾರೆ.