ಕನ್ನಡಪ್ರಭವಾರ್ತೆ, ದಾವಣಗೆರೆ, ಮಾ.2
ನಿಷ್ಠೆ, ನಿರ್ಮಲ ಭಾವವಿರದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಶ್ರೀರಂಗಪಟ್ಟದ ದುರ್ದುಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ಹಿರಿಯ ಕಲಾವಿದ ದಿ.ಪ್ರೊ.ವಿ.ಬಿ. ಹಿರೇಗೌಡರ್ ನೆನಪು, ಶ್ರದ್ಧಾಂಜಲಿ ಹಾಗೂ ಚಿತ್ರಕಲಾ ಪ್ರದರ್ಶನದ ಸಾನ್ನಿಧ್ಯ ವಹಿಸಿ ಮಾತನಾಡಿ, ನಿಷ್ಟೆ, ನಿರ್ಮಲ ಭಾವ ಹೊಂದುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು.
ಶಿಕ್ಷಣ, ಕಲೆ, ಸಾಹಿತ್ಯ, ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ನಿರ್ಮಲ ಭಾವ ಮೈಗೂಡಿಸಿಕೊಳ್ಳಬೇಕು. ಜಗತ್ತಿನ ಯಾವ ದೇಶವೂ ಸಾಟಿ ಇಲ್ಲದಂತಹ ಅತ್ಯದ್ಭುತ ಕಲೆ, ಸಂಸ್ಕೃತಿಯನ್ನು ನಮ್ಮ ದೇಶ ಹೊಂದಿದೆ. ಅದಕ್ಕೆ ನಾವು ಹೆಮ್ಮೆಪಡಬೇಕು ಎಂದರು.
ಹಿರೇಗೌಡರ ದೇಹ ಮಾತ್ರ ಇಂದು ನಮ್ಮೊಂದಿಗಿಲ್ಲ. ಅಂತಹ ಈ ಕಲಾವಿದನ ಕಲೆ ಎಂದಿಗೂ ಅಮರ ವಾಗಿರುತ್ತದೆ. ಸಿರಿ ಸಂಪತ್ತು ಎಷ್ಟಿದ್ದರೂ ಪ್ರಯೋಜನವಿಲ್ಲ. ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಮುನ್ನ ದೇಶದ ಉನ್ನತಿಗೆ ಪ್ರತಿಯೊಬ್ಬರೂ ಕಾಯಕ ನಿರತರಾದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಕಲೆ, ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿರುವ ಪ್ರೊ.ವಿ.ಬಿ. ಹಿರೇಗೌಡರ್ ಯುವ ಪೀಳಿಗೆಗೆ ಆದರ್ಶವಾಗಲಿ ಎಂದರು.
ಗೊಂದಲ ಸೃಷ್ಟಿ: ರಾಜ್ಯ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣ ಶೆಟ್ಟಿ ಮಾತನಾಡಿ, 130ಕ್ಕೂ ಹೆಚ್ಚು ಕಲಾ ಕಾಲೇಜುಗಳನ್ನು ಹೊಂದಿದ್ದ ಕರ್ನಾಟಕದಲ್ಲಿ ಇಂದು ಕೇವಲ 68 ಕಲಾ ಕಾಲೇಜು ಮಾತ್ರ ಉಳಿದಿವೆ. ಕಳೆದ 4 ದಶಕ ಹಿಂದೆ ಅನೇಕರ ಪರಿಶ್ರಮದಿಂದ ಚಿಗುರೊಡೆದಿದ್ದ ಕಲೆಯ ಸಿರಿ ಇಂದು ಕರಗಿ ಹೋಗುತ್ತಿದೆ. ಕಲಾ ಶಿಕ್ಷಣದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ಅವುಗಳು ಮೊದಲಿಗೆ ನಿವಾರಣೆಯಾಗಬೇಕಾಗಿದೆ ಎಂದರು.
ದಾವಣಗೆರೆ ಹೆಸರನ್ನು ಕಲಾ ಲೋಕದಲ್ಲಿ ಹೊಳೆಯುವಂತೆ ಮಾಡಿದ ಹಿರೇಗೌಡರ್ ಅತ್ಯದ್ಬುತ ಕಲಾವಿದರಾಗಿದ್ದರು ಎಂದು ಸ್ಮರಿಸಿದರು.
ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಡಾ.ವಿ.ಜಿ. ಅಂದಾನಿ, ಪ್ರೊ.ವಿ.ಬಿ. ಹಿರೇಗೌಡರ್ ಪುತ್ರಿ ವಾಣಿ, ಅಳಿಕ ಕೆ.ಪಿ. ಸತೀಶಬಾಬು, ಪ್ರಭುಗೌಡ ಮುಂಡರಗಿ, ಕುಟುಂಬ ಸದಸ್ಯರು, ಕಲಾಭಿಮಾನಿಗಳು ಇದ್ದರು.