ದಾವಣಗೆರೆ: ಮಾರಾಟ ಉತ್ತೇಜನ ನೌಕರರ ಕೈಗಾರಿಕಾ ತ್ರಿಪಕ್ಷೀಯ ಸಮಿತಿ ರದ್ದುಪಡಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಎಫ್.ಎಂ.ಆರ್.ಎ.ಐ. ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪಿ.ಜೆ. ಬಡಾವಣೆ ಸಂಘದ ಕಚೇರಿಯಿಂದ ಪದಾಧಿಕಾರಿಗಳ ನೇತೃತ್ವದಲ್ಲಿ ಆರಂಭಗೊಂಡ ಬೈಕ್ ರ್ಯಾಲಿಯುದ್ದಕ್ಕೂ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಲಾಯಿತು.
ಸಂಘಟನೆ ಹೋರಾಟದ ಫಲವಾಗಿ ಕಾನೂನಿನ ಸೌಲಭ್ಯವನ್ನು ಮಾರಾಟ ಪ್ರತಿನಿಧಿಗಳ ಸೇವಾ ನಿಯಮಾವಳಿಗಳನ್ನು ಸರ್ಕಾರ 1976ರಲ್ಲಿ ಜಾರಿಗೊಳಿಸಿತು. ಈ ಕಾಯ್ದೆ ಮಾರಾಟ ಪ್ರತಿನಿಧಿಗಳ ಮಾರಾಟ ಉತ್ತೇಜನ ಕಾಯ್ದೆ 1976 ಎಂಬುದಾಗಿ ಹೆಸರಿಸಲಾಯಿತು. ಆದರೆ, ಬಹಳಷ್ಟು ಮಾಲೀಕರು ತಮ್ಮ ಉದ್ಯೋಗಿಗಳನ್ನು ಸ್ವಉದ್ಯೋಗಕ್ಕಾಗಿ ಬಳಸಿಕೊಂಡು, ಕಾನೂನಿಗೂ ಕನಿಷ್ಠ ಗೌರವ ನೀಡದೆ ಇಂತಹ ನಿಯಾಮವಳಿಗಳನ್ನೇ ಧಿಕ್ಕರಿಸುತ್ತಿದ್ದಾರೆ. ಇಂತಹ ಬಲವಂತದ ತಪ್ಪುಗಳಿಗೆ ಕೇವಲ 1 ಸಾವಿರ ದಂಡ ಕಟ್ಟಿಸಿಕೊಳ್ಳುವುದು, ಉನ್ನತ ಶಿಕ್ಷೆಯ ಕಾಯ್ದೆ ಇಲ್ಲದಿರುವುದೂ ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಮಾರಾಟ ಪ್ರತಿನಿಧಿಗಳ ಸೇವಾ ನಿಯಮ ಉಲ್ಲಂಘಿಸುವ ಮಾಲೀಕರಿಗೆ ಕಟ್ಟುನಿಟ್ಟಿನ ಕ್ರಮ ಮತ್ತು ಜೈಲು ಶಿಕ್ಷೆ ವಿಧಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಯುಪಿಎ ಸರ್ಕಾರ ಮಾರಾಟ ಉತ್ತೇಜನ ಕಾರ್ಮಿಕರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಕೈಗಾರಿಕಾ ತ್ರಿಪಕ್ಷೀಯ ಸಮಿತಿಯನ್ನು ಜನವರಿ 2014ರಲ್ಲಿ ಸ್ಥಾಪಿಸಿತ್ತು. ಆದರೆ, ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಕೈಗಾರಿಕಾ ತ್ರಿಪಕ್ಷೀಯ ಸಮಿತಿಯನ್ನು 14ರಂದು ರದ್ಧುಪಡಿಸಿ ದೇಶಾದ್ಯಂತ ಲಕ್ಷಾಂತರ ಮಾರಾಟ ಉತ್ತೇಜನ ನೌಕರರ ಆಸೆ ಗಾಳಿಗೆ ತೂರಿದೆ ಎಂದರು.
ಮನವಿ ಸಲ್ಲಿಸುವ ಸಂದರ್ಭ ರಾಜ್ಯ ಕಾರ್ಯದರ್ಶಿ ಕೆ.ಎಚ್. ರಾಜು, ಜಿಲ್ಲಾ ಕಾರ್ಯದರ್ಶಿ ಎ.ವೆಂಕಟೇಶ, ಜಂಟಿ ಕಾರ್ಯದರ್ಶಿ ರಾಜು, ಖಜಾಂಚಿ ಮಹಾವೀರ, ಆನಂದ ಇತರರಿದ್ದರು.