ದಾವಣಗೆರೆ: ಕಿರಿಯ ವಯಸ್ಸಿನಿಂದಲೇ ಸಂಕಷ್ಟ ನುಂಗಿಕೊಂಡು ಬಂದ ಯುವತಿ ಬಾಳಿಗೆ ಹೊಸ ಬೆಳಕನ್ನು ಕಲ್ಪಿಸುವ ಮೂಲಕ ನಗರದ ರಾಜ್ಯ ಮಹಿಳಾ ನಿಲಯ ಧನ್ಯತಾಭಾವ ಅನುಭವಿಸಿತು.
ನಗರದ ರಾಜ್ಯ ಮಹಿಳಾ ನಿಲಯದಲ್ಲಿ ನಿವಾಸಿ, ಯುವತಿ ಪೂರ್ಣಿಮಾ (22) ಬಾಲ್ಯದಿಂದಲೂ ಸಂಕಷ್ಟದಲ್ಲೇ ಬೆಳೆದವರು. ಚಿಕ್ಕಮಗಳೂರು ಜಿಲ್ಲೆ ವಿ.ಸಿದ್ಧರಹಳ್ಳಿ ಪೂರ್ಣಿಮಾ ತೊರೆದು ಹೋದ ತಾಯಿ ಪ್ರೀತಿ ವಂಚಿತಳು. ನಂತರ ತಂದೆ 2ನೇ ಮದುವೆಯಾದ ವೇಳೆ ಮಲತಾಯಿ ಕಿರುಕುಳದಿಂದ ಬೇಸತ್ತವರು. 2012ರಲ್ಲಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾದರು.
ತಂದೆ, ಮಲತಾ ಯಿಯಿಂದ ನಿರ್ಲಕ್ಷ್ಯೆ ಗೊಳಗಾಗಿ ಮಹಿಳಾ ನಿಲಯದ ಆಶ್ರಯದಲ್ಲೇ ಬದುಕು ಕಟ್ಟಿಕೊಂಡಳು. ಇಂತಹ ಅನಾಥ, ಅಸಹಾಯ ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಾ ಬಂದ ರಾಜ್ಯ ಮಹಿಳಾ ನಿಲಯವು ಪೂರ್ಣಿಮಾ ಬಾಳಿಗೂ ದಾರಿ ತೋರಿಸುವ ಕಾರ್ಯಕ್ಕೆ ಸಜ್ಜಾಯಿತು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಹಾರೆ ಗ್ರಾಮದ ಘಟ್ಟದ ವರ ಧನಶೇಖರ್ ಅವರ ತಂದೆ ನಿಧನರಾಗಿದ್ದಾರೆ. ತಾಯಿ ಇದ್ದಾರೆ. ಐವರು ಸಹೋದರಿಯರು, ಇಬ್ಬರು ಅಣ್ಣಂದಿರನ್ನು ಹೊಂದಿರುವ ಧನಶೇಖರ ಅಕ್ಕಂದಿರು, ಅಣ್ಣಂದಿರ ಮದುವೆಯಾಗಿದೆ. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಕುಟುಂಬಕ್ಕೆ ಸೇರಿದ 4.26 ಎಕರೆ ಅಡಕೆ ತೋಟ, 1.14 ಬತ್ತದ ಗದ್ದೆ, ಟ್ರ್ಯಾಕ್ಟರ್, ಜೀಪು, 2 ಬೈಕ್ ಇದ್ದು, ವಾರ್ಷಿಕ 3 ಲಕ್ಷ ಆದಾಯ ಹೊಂದಿದ್ದಾರೆ.
ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಧನಶೇಖರ್ ಜತೆಗೆ ಪೂರ್ಣಿಮಾ ಮದುವೆ ಸಮಾರಂಭವು ನಗರದ ರಾಜ್ಯ ಮಹಿಳಾ ನಿಲಯದಲ್ಲಿ ಸೋಮವಾರ ನೆರವೇರಿತು. ನಿಲಯದ ಮೇಲ್ವಿಚಾರಕಿ ಕೆ.ಪಿ.ಎಂ. ಗಂಗಮ್ಮ ವಧುವಿನ ತಾಯಿ ಸ್ಥಾನದಲ್ಲಿ ನಿಂತು, ಮದುವೆ ನಡೆಸಿಕೊಟ್ಟರು. ವರನ ಬಂಧುಗಳು, ಅಧಿಕಾರಿಗಳು, ನಿಲಯದ ನಿವಾಸಿಗಳು ಹಾಜರಿದ್ದು, ನವ ಜೋಡಿಗೆ ಶುಭ ಹಾರೈಸಿ, ಆಶೀರ್ವದಿಸಿದರು.
ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಬಸವರಾಜಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ, ಸುಶೀಲಮ್ಮ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಕೆ.ಎನ್. ಶಿವಕುಮಾರ, ವಕೀಲರಾದ ಐ. ವಸಂತಕುಮಾರಿ, ಅಮೀರಾಬಾನು ಇತರರು ಇದ್ದರು.
ಈವರೆಗೆ 26 ಜೋಡಿಗೆ ಕಂಕಣ ಭಾಗ್ಯ
ದಾವಣಗೆರೆಯಲ್ಲಿ ರಾಜ್ಯ ಮಹಿಳಾ ನಿಲಯವು 1977ರಲ್ಲಿ ಸ್ಥಾಪನೆಯಾಗಿದ್ದು, ಸಂಸ್ಥೆಯಲ್ಲಿ 43 ವಯಸ್ಕ ನಿವಾಸಿಗಳು, ಮೂವರು ಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ. ಈವರೆಗೆ 26 ಜೋಡಿಗೆ ಕಂಕಣ ಭಾಗ್ಯ ಕಲ್ಪಿಸಿದ್ದು, ತಾವು ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ 19ನೇ ಮದುವೆ ಇದಾಗಿದೆ. ಅಲ್ಲದೆ, 10 ನಾಮಕರಣ ಕಾರ್ಯಗಳು ನಡೆಯುತ್ತಿವೆ ಎಂದು ಅಧೀಕ್ಷಕಿ ಗಂಗಮ್ಮ ತಿಳಿಸಿದರು.