ಮಾಯಕೊಂಡ: ಶಾಲಾವಧಿಯಲ್ಲಿ ಮಕ್ಕಳು, ಶಿಕ್ಷಕರು ಪ್ರಾಣವನ್ನು ಕೈಯಲ್ಲಿಹಿಡಿದು ಪಾಠ ಕೇಳುವ/ಹೇಳುವಂತಾಗಿರುವ ಅನಿವಾರ್ಯ ಸ್ಥಿತಿ ದಾವಣಗೆರೆ ತಾ. ಮಾಯಕೊಂಡ ಗ್ರಾಮದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ನಿರ್ಮಾಣವಾಗಿದೆ.
ಶಾಲಾ ಕಟ್ಟಡದ ಚಾವಣಿ ಕುಸಿಯುತ್ತಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆಗಾಗಲಿ, ಜಿಪಂ, ಜಿಲ್ಲಾಡಳಿತಕ್ಕಾಗಲಿ ಅದರ ಪರಿವೆಯೇ ಇಲ್ಲದಂತಾಗಿದೆ.
ಶಿಥಿಲ ಕಟ್ಟಡದ ಚಾವಣಿ ಯಾವುದೇ ಕ್ಷಣದಲ್ಲಾದರೂ ಬೀಳಬಹುದೆಂಬ ಆತಂಕ ಮಕ್ಕಳು, ಶಿಕ್ಷಕರು ಹಾಗೂ ಪಾಲಕರನ್ನು ಕಾಡುತ್ತಿವೆ. ಮಳೆಗಾಲವಿರುವ ಕಾರಣ ಚಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಚಾವಣಿ ಮೇಲ್ಭಾಗದ ಸಿಮೆಂಟ್ ಮತ್ತು ಕಲ್ಲಿನ ಪದರಗಳು ಆಗಾಗ ಉದುರಿ ಬೀಳುತ್ತಲೇ ಇವೆ. ಆದರೂ ಯಾರೂ ಇತ್ತ ಗಮನ ಹರಿಸುವ ಗೋಜಿಗೆ ಹೋಗುತ್ತಿಲ್ಲ.
ಒಂದು ಮತ್ತು ಎರಡನೇ ತರಗತಿಯ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಓದುವ ತರಗತಿಯಲ್ಲಂತೂ ಇಂತಹ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಜೋರಾಗಿ ಗಾಳಿ ಬೀಸಿದರೆ, ಮಳೆಯಾದರೆ, ಚಾವಣಿ ಒಣಗಿದರೆ ಹೀಗೆ ಕಲ್ಲು, ಸಿಮೆಂಟಿನ ಪುಡಿ ಉದುರಿ ಬೀಳುತ್ತಲೇ ಇರುತ್ತವೆ. ಶಾಲೆಗೆ ಹೆಚ್ಚುವರಿ ಕೊಠಡಿಯೂ ಇಲ್ಲದ್ದರಿಂದ ಇರುವ ಶಿಥಿಲ ಕಟ್ಟಡದಲ್ಲೇ ಮಕ್ಕಳಿಗೆ ಬೋಧನೆ ಮಾಡಬೇಕಾದ ಸ್ಥಿತಿ ಇದ್ದು, ಪಾಲಕರಿಗೆ ಆತಂಕ ಹೆಚ್ಚಾಗಿದೆ.
ಎಚ್ಚೆತ್ತುಕೊಳ್ಳಲಿ: ದುರಂತ, ದುರ್ಘಟನೆ ಸಂಭವಿಸುವ ಮುನ್ನ ಕ್ಷೇತ್ರದ ತಾಪಂ, ಜಿಪಂ ಸದಸ್ಯರು, ಕ್ಷೇತ್ರದ ಶಾಸಕರು, ಸಂಸದರು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.
ಶಾಲೆಯಲ್ಲಂತೂ ನಿತ್ಯವೂ ಮುಖ್ಯ ಶಿಕ್ಷಕರು, ಸಹ ಶಿಕ್ಷಕ-ಶಿಕ್ಷಕಿಯರು ದೇವರ ಮೇಲೆ ಭಾರ ಹಾಕಿ, ತರಗತಿಗೆ ಹಾಜರಾಗುತ್ತಾರೆ. ಸರ್ಕಾರಿ ಶಾಲೆ ಅವ್ಯವಸ್ಥೆ ಬಗ್ಗೆ ಜಿಪಂ, ತಾಪಂ, ಗ್ರಾಪಂ ಜನ ಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿ ವರ್ಗ ಆದಷ್ಟು ಬೇಗ ಶಿಥಿಲ ಕಟ್ಟಡಕ್ಕೆ ಕಾಯಕಲ್ಪ ನೀಡ ದಿದ್ದರೆ, ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು.
ಈ ಬಗ್ಗೆ ಯಾವುದೇ ಉದಾಸೀನ ಮಾಡಿದರೆ, ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಕನ್ನಡ ಯುವಶಕ್ತಿ ಕೇಂದ್ರದ ಗೌರವಾಧ್ಯಕ್ಷ ಸಂಡೂರು ರಾಜಶೇಖರ, ಮಾಜಿ ಅಧ್ಯಕ್ಷ ಗುರುನಾಥ, ಮುಖಂಡರಾದ ಜಗದೀಶ, ಚಂದ್ರಪ್ಪ ಇತರರು ಎಚ್ಚರಿಸಿದ್ದಾರೆ.
-ಎಲ್.ಜೆ. ಉಮಾಶಂಕರ್