ಹರಪನಹಳ್ಳಿ: ಬಸ್ ಸೌಲಭ್ಯಕ್ಕೆ ಆಗ್ರಹಿಸಿ ತಾಲೂಕಿನ ಬಂಡ್ರಿ ತಾಂಡದ ಗ್ರಾಮಸ್ಥರು, ವಿದ್ಯಾರ್ಥಿಗಳು ಎನ್‌ಎಸ್‌ಯುಐ ಸಂಘಟನೆ ನೇತೃತ್ವದಲ್ಲಿ ಬುಧವಾರ ಬಂಡ್ರಿ ಕ್ರಾಸ್‌ನಲ್ಲಿ ಪ್ರತಿಭಟನೆ ನೆಡೆಸಿದರು.
ಎನ್‌ಎಸ್‌ಯುಐ ತಾಲೂಕಾಧ್ಯಕ್ಷ ಪಿ. ಶಿವಕುಮಾರನಾಯ್ಕ ಮಾತನಾಡಿ, ಬಂಡ್ರಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಪರದಾಡುವಂತಾಗಿದೆ. ಹಡಗಲಿಯಿಂದ ಹರಪನಹಳ್ಳಿಗೆ ಸಂಚರಿಸುವ ಸರ್ಕಾರಿ ಬಸ್ಸುಗಳು ಬಂಡ್ರಿ, ಕಾನಹಳ್ಳಿ, ಚಿಕ್ಕಳ್ಳಿ, ಎಡತ್ತಿನಹಳ್ಳಿ ಗ್ರಾಮಗಳಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಬೆಳಗಿನ ಸಮಯದಲ್ಲಿ ಕಾಲೇಜುಗಳಿಗೆ ತೆರಳುವ ಸುಮಾರು 500 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ತಡವಾಗಿ ಹಾಜರಾಗುವುದರಿಂದ ಹಾಜರಾತಿ ಸಿಗುತ್ತಿಲ್ಲ. ಪರೀಕ್ಷೆಗೆ ಹಾಜರಾದಂತಹ ಪರಿಸ್ಥಿತಿ ಎದುರಾಗಲಿದೆ. ಬಂಡ್ರಿ ತಾಂಡದ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದರು.
ಹಡಗಲಿಯಿಂದ ಬರುವ ಬಸ್ಸು 8.30ಕ್ಕೆ ಬಂಡ್ರಿ ತಾಂಡಕ್ಕೆ ಬರುವ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಸರ್ಕಾರಿ ಬಸ್ಸುಗಳು ಕೋರಿಕೆ ನಿಲುಗಡೆ ಮಾಡಬೇಕು. ಹಡಗಲಿಯಿಂದ ಹರಪನಹಳ್ಳಿಗೆ ಕಾಲೇಜು ಸಮಯಕ್ಕೆ
ಅನುಗುಣವಾಗಿ 3 ಬಸ್ಸು ಸಂಚಾರ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಸಂಘಟನೆ ಕಾರ್ಯದರ್ಶಿ ಟಿ. ಪ್ರವೀಣ್‌ಕುಮಾರ್, ಉಪಾಧ್ಯಕ್ಷ ಎಂ.ಕುಮಾರ್, ಕಾರ್ಯದರ್ಶಿ ಸುರೇಶ್, ಯೋಗೀಶನಾಯ್ಕ, ಷರೀಪ್, ರವಿಕುಮಾರ್, ಕೆ.ಬಸವರಾಜ್ ಇತರರು ಭಾಗವಹಿಸಿದ್ದರು.