ದಾವಣಗೆರೆ: ಸಮಾಜದಲ್ಲಿ ಜಾತಿ ವ್ಯವಸ್ಥೆಯು ಬಲವಾಗಿ ಬೇರೂರಿದ್ದು, ಜಾತಿಗೊಬ್ಬ, ಸಮಾಜಕ್ಕೆ ಒಬ್ಬರಂತೆ ಸ್ವಾಮೀಜಿ ಹುಟ್ಟಿಕೊಳ್ಳುವುದರಿಂದ ಸಮಾಜ ಅಭಿವೃದ್ಧಿ ಹೊಂದುವುದಿಲ್ಲ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ರಾಜ್ಯ ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮೀಜಿಯೊಬ್ಬರಿಂದಲೇ ಸಮಾಜವೂ ಉದ್ಧಾರವಾಗುವುದಿಲ್ಲ. ನಾವು, ನೀವು ಹೀಗೆ ಎಲ್ಲರೂ ಎಚ್ಚೆತ್ತುಕೊಂಡು ಸೂಕ್ತವಾಗಿ ನಡೆದಾಗ ಸಮಾಜ ಅಭಿವೃದ್ಧಿ ಹೊಂದುತ್ತದೆ. ಆಗ ಸಮಾಜದಲ್ಲೂ ತನ್ನಷ್ಟಕ್ಕೆ ತಾನೇ ಬಲಾವಣೆಯೂ ಮೂಡುತ್ತದೆ. 12ನೇ ಶತಮಾನದಲ್ಲೇ ಬಸವಣ್ಣನವರು ಮಾನವ ಧರ್ಮದಲ್ಲಿ ಎಲ್ಲರೂ ಒಂದೇ ಎಂಬುದಾಗಿ ಸಾರಿದ್ದು, ಅಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಕೂಡಿ ಬಾಳೋಣ, ಕೂಡಿ ಸಾಗೋಣ ಎಂದು ಕರೆ ನೀಡಿದರು.
ವಿದ್ಯೆಯನ್ನು ಇಷ್ಟಪಟ್ಟು ಕಲಿಯಬೇಕು. ಶಿಕ್ಷಣವು ಯಾರ ನ್ನೂ ಹಾಳು ಮಾಡುವುದಿಲ್ಲ. ಪ್ರತಿಯೊಬ್ಬರ ಕಣ್ಣು ತೆರೆಸುವ ಕೆಲಸವನ್ನು ವಿದ್ಯೆ ಮಾಡುತ್ತದೆ. ಸಮಾಜದಲ್ಲಿ ಜಾತಿ ಹೊರತಾಗಿ ಸಿಗುವ ಒಂದೇ ಅಂಶವೆಂದರೆ ಅದು ಶಿಕ್ಷಣ ಮಾತ್ರ ಎಂದು ಅವರು ತಿಳಿಸಿದರು.
ಛಲವಾದಿ ಸಮಾಜ ಬಾಂಧವರು ಇಲ್ಲದ ಊರೇ ಎಲ್ಲೂ ಇಲ್ಲ. ಆದರೆ, ಒಗ್ಗಟ್ಟಿನ ಕೊರತೆಯಿಂದಾಗಿ ಛಲವಾದಿ ಸಮಾಜವನ್ನು ನಾವೇ ಮರೆ ಮಾಚುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಾಗಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟ, ತೋರಿಸಿದ ಮಾರ್ಗದಲ್ಲಿ, ಬಾಬಾ ಸಾಹೇಬರ ಆದರ್ಶ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು, ಸಾಗಬೇಕಾಗಿದೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎನ್. ರಂಗನಾಥ ಮಾತನಾಡಿ, ಬಡತನ ಎಂದಿಗೂ ಶಾಪವಲ್ಲ. ಸಿರಿತನ ವರವೂ ಅಲ್ಲ. ಆದರೆ, ಬಡತನ ಸಾಧನೆ, ಹೋರಾಟಗಳಿಗೆ ಹಾದಿ ಮಾಡಿಕೊಡುತ್ತದೆ ಎಂಬ ಸಂಗತಿಯನ್ನು ನಾವು ಮರೆ ಯಬಾರದು. ವಿದ್ಯಾರ್ಥಿಗಳು ಪರಿಶ್ರಮ, ಆಕಾಂಕ್ಷೆ, ಭರವಸೆ ಈ ಮೂರೂ ಮಂತ್ರಗಳನ್ನು ಸ್ಮರಿಸುವುದರೊಂದಿಗೆ ಸಾಗಿದಲ್ಲಿ ಯಶಸ್ಸು ಎಂಬುದು ಶತಃಸಿದ್ಧ ಎಂಬುದನ್ನು ಮರೆಯಬೇಡಿ ಎಂದರು.
ಮಹಾಸಭಾ ಜಿಲ್ಲಾ ಸಂಚಾಲಕ ಬಿ.ಎಸ್. ವೆಂಕಟೇಶ ಮಾತನಾಡಿದರು. ಪಾಲಿಕೆ ಸದಸ್ಯ ಎಂ. ಹಾಲೇಶ, ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ರಾಜ್ಯ ಅಧ್ಯಕ್ಷ ಡಾ.ಸಂದೀಪ್, ಕಾರ್ಯದರ್ಶಿ ಡಾ.ನವೀನ್ ಮಾನೀಯಾ, ಮುಖಂಡರಾದ ಎಂ.ಸಿ. ಓಂಕಾರಪ್ಪ, ರಾಮಪ್ಪ, ಉಮೇಶ ದೊಡ್ಮನಿ ಇತರರು ಕಾರ್ಯಕ್ರಮದಲ್ಲಿದ್ದರು.
ಇದೇ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.