ಹೊನ್ನಾಳಿ: ಪಟ್ಟಣದ ಸುಣಗಾರ ಬೀದಿಯ ಗಂಗಾ ಮತಸ್ಥ ಸಮಾಜದ ಬಂಧುಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಗಂಗವ್ವನ ಹಬ್ಬ ಆಚರಿಸಿದರು. ಪಟ್ಟಣದ ಸುಣಗಾರ ಬೀದಿಯ ನೂರಾರು ಮಹಿಳೆಯರು ಆಷಾಡ ಮಾಸದ ಎರಡನೇ ವಾರದಲ್ಲಿ ಈ ಹಬ್ಬವನ್ನು ಭಕ್ತಿಯಿಂದ ಆಚರಿಸುತ್ತಾರೆ. ತಮ್ಮ ಬೀದಿಯಿಂದ ತುಂಗಭದ್ರಾ ನದಿಗೆ ಕಾಲ್ನಡಿಗೆಯಲ್ಲಿ ಸಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಅಲ್ಲಿಂದ ತುಮ್ಮಿನಕಟ್ಟೆ ರಸ್ತೆಯಲ್ಲಿರುವ ದುರ್ಗಮ್ಮನ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ಮಳೆ ಬೆಳೆ ಆಗಲೆಂದು ದೇವರಲ್ಲಿ ಇಡೀ ಜನಾಂಗ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ. ನಂತರ ಮನೆಗಳಿಗೆ ತೆರಳಿ ಅಲ್ಲಿ ಪೂಜೆಗೆಂದು ತಯಾರಿಸಿದ ನೈವೇಧ್ಯವನ್ನು ಭಕ್ತಿಯಿಂದ ಬಂಧುಗಳು ಪರಸ್ಪರ ಹಂಚಿಕೊಂಡು ಸೇವಿಸಿ ಸಂಭ್ರಮಿಸುತ್ತಾರೆ.