

ವಾಷಿಂಗ್ಟನ್: ಭಾರತದಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ನೇತೃತ್ವದ ಪ್ರತಿಭಟನೆಗಳಿಗೆ ಅಮೆರಿಕದ ದಾನಿಗಳು ಹಣ ಒದಗಿಸುತ್ತಿದ್ದಾರೆ ಎಂಬ ಸ್ಫೋಟಕ ಆರೋಪವನ್ನು ಹಾಲಿವುಡ್ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಮಾಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಅಮೆರಿಕದ ದಾನಿಗಳು ಹಣ ಒದಗಿಸುತ್ತಾರೆ ಎಂದು ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಬುಧವಾರ ಆರೋಪಿಸಿದ್ದಾರೆ. ಅಲ್ಲದೆ ಇದು ಮೌನವಾಗಿರುವ ಸಮಯ ಅಲ್ಲ ಎಂದು ಹೇಳಿರುವ ಅವರು, ಭಾರತದ ಯುವ ದೇಶಭಕ್ತರು ಈ ವಿಛಿದ್ರಕಾರಿ ಶಕ್ತಿ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಕರೆಕೊಟ್ಟಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಅಕ್ರಮಗಳು ನಡೆದಿವೆ, ಹೀಗಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಮತ್ತು ಸಿಜೆಪಿ ಬೆಂಬಲಿಗರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಮಿಲ್ಬೆನ್ ಅವರ ಈ ಹೇಳಿಕೆ ವ್ಯಾಪಕ ಪ್ರಾಮುಖ್ಯತೆ ಪಡೆದಿದೆ.
ಮಿಲ್ಬೆನ್ ಹೇಳಿದ್ದೇನು?
ಸಿಜೆಪಿ ಮುಖಂಡ ಅಭಿಜಿತ್ ದೀಪ್ಕೆ ಮತ್ತು ಅವರ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನಾಯಕತ್ವವನ್ನು ವಿರೋಧಿಸುವ ಅಮೆರಿಕದ ದಾನಿಗಳು ಹಣಕಾಸು ನೆರವು ನೀಡುತ್ತಿದ್ದಾರೆ ಎಂದು 41 ವರ್ಷದ ಗಾಯಕಿ ಮಿಲ್ಬೆನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
‘ಭಯಪಡಬೇಡಿ, ನನ್ನ ಯುವ ದೇಶಭಕ್ತರೇ. 25 ವರ್ಷಗಳಿಂದ ಭಾರತಕ್ಕೆ ಸೇವೆ ಸಲ್ಲಿಸಿರುವ, ಅದರಲ್ಲಿ 12 ವರ್ಷ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ಮತ್ತು ಸತತ ಮೂರು ಅವಧಿಗೆ ಆಯ್ಕೆಯಾಗಿರುವ ನಿಮ್ಮ ಪ್ರಧಾನಿ, ನನ್ನ ದೇಶದಿಂದ ಬರುವ ವಿಘಟನಕಾರಿ ಶಕ್ತಿಗಳಿಗೆ ಮಣಿಯುವುದಿಲ್ಲ’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
‘ಈ ದಾನಿಗಳು ಜಾಗತಿಕವಾಗಿ ಒಂದೇ ರೀತಿಯ ತಂತ್ರ ಅನುಸರಿಸುತ್ತಾರೆ. ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿಕೊಂಡು, ಆಯಾ ದೇಶದ ಅಮೆರಿಕದಲ್ಲಿ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಗುರುತಿಸುತ್ತಾರೆ. ಅವರನ್ನು ತಮ್ಮ ಸಿದ್ಧಾಂತದತ್ತ ಸೆಳೆದು, ಮತ್ತೆ ಅವರ ದೇಶಕ್ಕೆ ಕಳುಹಿಸುತ್ತಾರೆ. ಬಳಿಕ ಅಲ್ಲಿ ಅರಾಜಕತೆ ಮತ್ತು ವಿನಾಶ ಸೃಷ್ಟಿಸಲು ಹಣಕಾಸು ನೆರವು ನೀಡುತ್ತಾರೆ. ಈ ಪ್ರಯತ್ನಗಳಲ್ಲಿ ಅವರು ಯಶಸ್ವಿಯಾಗಿಲ್ಲ. ಆದರೆ, ಆಯಾ ದೇಶಗಳ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರಿದ್ದಾರೆ’ ಎಂದು ಮಿಲ್ಬೆನ್ ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಯಾವಾಗಲೂ ಪ್ರತಿರೋಧ ಚಳವಳಿ ಇರಬೇಕು. ಭಾರತದಲ್ಲಿ ಹೊಸ ಧ್ವನಿಯೊಂದು ಮೂಡಿಬರಬೇಕಾದ ಸಮಯ ಬಂದಿದೆ. ಭಾರತದ ನೆಲದಲ್ಲೇ ಹುಟ್ಟಿ, ಬೆಳೆದು, ಶಿಕ್ಷಣ ಪಡೆದವರು ಎದ್ದು ನಿಲ್ಲಬೇಕು, ಸಂಘಟಿತರಾಗಬೇಕು ಮತ್ತು ಕಾಕ್ರೋಚ್ ಪಾರ್ಟಿಯ ವಿಘಟನಕಾರಿ ಮನೋಭಾವದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಬೇಕು. ಯುವ ದೇಶಭಕ್ತರೇ, ಎದ್ದು ನಿಲ್ಲಿ! ಎದ್ದು ನಿಲ್ಲಿ!’ ಎಂದು ಅವರು ಹೇಳಿದ್ದಾರೆ.