

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ಶಾಕ್ ನೀಡಿದ್ದಾರೆ. ಅಕ್ಟೋಬರ್ 10 ರಂದು ಮುಂಬೈನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ, ಅ.28ರೊಳಗೆ ಭಾರತವನ್ನು ತೊರೆಯುವಂತೆ ಪೊಲೀಸರು ನಟನಿಗೆ 'ಲೀವ್ ಇಂಡಿಯಾ ನೋಟಿಸ್' (Leave India Notice) ಜಾರಿ ಮಾಡಿದ್ದಾರೆ.
ನಟ ಇಮ್ರಾನ್ ಖಾನ್ ಭಾರತೀಯ ಮೂಲದವರಾಗಿದ್ದರೂ ಮತ್ತು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದರೂ, ಅವರು ಅಮೆರಿಕದ ಪೌರತ್ವ (US Citizenship) ಹೊಂದಿದ್ದಾರೆ. ಜೊತೆಗೆ ಭಾರತದ ಒಸಿಐ (OCI) ಕಾರ್ಡ್ ಪಡೆದಿದ್ದಾರೆ.
ವಲಸೆ ಕಾಯ್ದೆಯ ನಿಯಮಗಳ ಪ್ರಕಾರ, ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿಗಳು ಭಾರತದಲ್ಲಿ ಯಾವುದೇ ರಾಜಕೀಯ ಪ್ರತಿಭಟನೆ ಅಥವಾ ಧರಣಿಗಳಲ್ಲಿ ಭಾಗವಹಿಸುವಂತಿಲ್ಲ. ಇದು ವಿದೇಶಿಯರ ಕಾನೂನಿನ ನೇರ ಉಲ್ಲಂಘನೆಯಾಗುವುದರಿಂದ ಪೊಲೀಸರು ಈ ಗಂಭೀರ ಕ್ರಮ ಕೈಗೊಂಡಿದ್ದಾರೆ.
ಇಮ್ರಾನ್ ಖಾನ್, ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಬೆಂಬಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಭಾರತದ ಪ್ರಜೆಯಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಸಂಬಂಧಿತ ವಲಸೆ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನಟ ಆಮಿರ್ ಖಾನ್ ಅವರ ಸೋದರಳಿಯ ನಟ ಇಮ್ರಾನ್ ಖಾನ್ಗೆ ಭಾರತ ತೊರೆಯುವಂತೆ ನೋಟಿಸ್ (LIN) ನೀಡಲಾಗಿದೆ. ನೋಟಿಸ್ ಪ್ರಕಾರ, ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾರತದ ಪ್ರಜೆಯಲ್ಲದಿದ್ದರೂ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 12ರಂದು ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ನಟನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಈ ದೂರು ಸಲ್ಲಿಸಲಾಗಿತ್ತು. ಇದೀಗ ಪೊಲೀಸರ ಕ್ರಮಕ್ಕೆ ಈ ದೂರು ಕಾರಣವಾಗಿದೆ.
ಇಮ್ರಾನ್ ಖಾನ್ ಅಮೆರಿಕದ ಪೌರತ್ವ ಹೊಂದಿದ್ದಾರೆ ಎಂದು ಸೋಮಯ್ಯ ಆರೋಪಿಸಿದ್ದರು. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮುಸ್ಲಿಂ ವಿರೋಧಿ ನಿರೂಪಣೆಯಾಗಿ ಬಿಂಬಿಸಲು ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ ಎಂದು ಪ್ರಶ್ನಿಸಿದ್ದರು.
ಇಮ್ರಾನ್ ಖಾನ್ ಅವರನ್ನು ತಕ್ಷಣ ವಿಚಾರಣೆಗೆ ಕರೆಯುವಂತೆ ನಾನು ಒತ್ತಾಯಿಸಿದ್ದೇನೆ. ಅವರನ್ನು ಕರೆಸಿ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ” ಎಂದು ಸೋಮಯ್ಯ ಹೇಳಿದ್ದರು.
ಇಮ್ರಾನ್ ಖಾನ್ ಅಲ್ಲಿ ಏಕೆ ಇದ್ದರು? SIR ಪ್ರಕ್ರಿಯೆ ಮುಸ್ಲಿಂ ವಿರೋಧಿಯಾಗಿದೆ ಎಂಬ ನಿರೂಪಣೆಯನ್ನು ಪ್ರಚೋದಿಸಲು ಅವರು ಬಂದಿದ್ದರೇ? ನಾನು ಮಾಲಬಾರ್ ಹಿಲ್ ವಿಧಾನಸಭಾ ಕ್ಷೇತ್ರದಲ್ಲಿದ್ದೇನೆ. ಇಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ ಇದೆ. ಆದರೆ, SIR ಪ್ರಕ್ರಿಯೆಯಡಿ ಒಟ್ಟು ಮತದಾರರ ಪಟ್ಟಿಯಿಂದ ಶೇ.40ರಷ್ಟು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದರು.