

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಶನಿವಾರ ನಡೆದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ ಅವರಿಗೆ ಈಗ ತೀವ್ರ ಸಂಕಷ್ಟ ಎದುರಾಗಿದೆ.
ಅಮೆರಿಕದ ಪ್ರಜೆಯಾಗಿರುವ ನಟ ಇಮ್ರಾನ್ ಖಾನ್ ಅವರು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೀಗ ಇಮ್ರಾನ್ ಖಾನ್ ವಿರುದ್ಧ ಮುಂಬೈನ ಗಮದೇವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಈ ಕುರಿತು 'ಎಕ್ಸ್' (X) ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರು, "ನಾನು ಗಮದೇವಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ. ನನ್ನ ದೂರಿಗೆ ಸ್ಪಂದಿಸಿದ ಪೊಲೀಸರು, ನಟ ಇಮ್ರಾನ್ ಖಾನ್ ಅವರಿಗೆ ಸಮನ್ಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರು, ಈ ಕುರಿತು ಎಫ್‌ಆರ್‌ಆರ್‌ಒ(FRRO) ವಿದೇಶಿ ಪ್ರಜೆಗಳ ವಿಭಾಗಕ್ಕೆ ವರದಿ ಕಳುಹಿಸಿದ್ದಾರೆ; ಜೊತೆಗೆ ನಾನು ಮುಂಬೈ ವಿಮಾನ ನಿಲ್ದಾಣದಲ್ಲಿರುವ ಎಫ್‌ಆರ್‌ಆರ್‌ಒ ವಲಸೆ ವಿಭಾಗಕ್ಕೂ ದೂರು ಸಲ್ಲಿಸಿದ್ದೇನೆ. ನಾನು ಎಫ್‌ಆರ್‌ಆರ್‌ಒ ಅಧಿಕಾರಿಯೊಂದಿಗೂ ಮಾತನಾಡಿದ್ದೇನೆ" ಎಂದು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದು, ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಹಾಗೂ ಭಾರತದ ಸಾಗರೋತ್ತರ ಪೌರತ್ವ(OCI) ನಿಯಮಗಳು ಮತ್ತು ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಕೂಡಲೇ ಅವರನ್ನು ಆ ದೇಶಕ್ಕೆ ಗಡಿಪಾರು ಮಾಡಬೇಕು ಎಂದು ಕಿರೀಟ್ ಸೋಮಯ್ಯ ಅವರು ಒತ್ತಾಯಿಸಿದ್ದಾರೆ.
"ಭಾರತೀಯ ಪ್ರಜೆಗಳಿಗೆ ಇರುವಂತಹ ಹಕ್ಕುಗಳು ವಿದೇಶಿ ಪ್ರಜೆಗಳಿಗೆ ಇರುವುದಿಲ್ಲ," ಎಂದು ಕಿರೀಟ್ ಸೋಮಯ್ಯ ಅವರು ಈ ಹಿಂದೆ ಹೇಳಿದ್ದರು.