ಜಗಳೂರು: ದಾನದಲ್ಲೇ ಶ್ರೇಷ್ಠವಾದುದು ರಕ್ತದಾನ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಪ್ರಭುದೇವ ಬಣಕಾರ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗೆ ರಕ್ತದಾನ ಮಹಾದಾನ ವಿಷಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು. ರಕ್ತದಾನದ ಬಗ್ಗೆ ಯಾವುದೇ ತಪ್ಪು ಗ್ರಹಿಕೆ ಬೇಡ. ರಕ್ತದಾನ ಮಾಡಿದ ನಂತರ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವ ಜೊತೆಗೆ ಉತ್ತಮ ಆರೋಗ್ಯಕ್ಕೂ ರಕ್ತದಾನ ಸಹಕಾರಿ ಎಂದು ಅವರು ತಿಳಿಸಿದರು. ಬಿ.ಎಚ್.ಇ. ಗೌರಮ್ಮ ಮಾತನಾಡಿ, ರಕ್ತದಾನದಿಂದ ರಕ್ತದ ಚಲನವಲನ ಕ್ರಿಯೆ ಉತ್ತಮವಾಗುವುದಲ್ಲದೇ, ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಕಾರಣವಾಗುತ್ತದೆ. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು. ಐಸಿಟಿಸಿ ವಿಭಾಗದ ಉಮೇಶ, ಸುರೇಶ ಬಾಬು, ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ತಾಂತ್ರಿಕ ಸಿಬ್ಬಂದಿ, ರಕ್ತದಾನಿಗಳು, ಆಶಾ ಕಾರ್ಯಕರ್ತೆಯರು ಇದ್ದರು.