ಹೊನ್ನಾಳಿ: ರಾಜ್ಯದಲ್ಲಿ ಮಹಿಳೆಯರ, ಯುವತಿಯರ ಹಾಗೂ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಸಹ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ತಾಲೂಕು ಎಸ್ಎಫ್ಐ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನೂರಾರು ಕಾಲೇಜ್ ಹಾಗೂ ಪ್ರೌಢ ಶಾಲಾ ವಿಧ್ಯಾರ್ಥಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಟಿ.ಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ರೇಷ್ಮಾ ಹಾನಗಲ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಎಸ್ಎಪ್ಐ ಘಟಕದ ಅಧ್ಯಕ್ಷ ವಿನಯ್ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಮಹಿಳೆಯರು, ಯುವತಿಯರು ಹಾಗೂ ಮುಗ್ಧ ಮಕ್ಕಳ ಮೇಲೂ ಅತ್ಯಾಚಾರ ನಡೆದರೂ ಸರ್ಕಾರ ಮೂಕ ಪೇಕ್ಷಕನಂತೆ ವರ್ತಿಸುತ್ತಿರುವುದುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವರ್ಷ 325 ಬಾಲಕಿಯರು ಕಾಣೆಯಾಗಿದ್ದಾರೆ ಮತ್ತು 151 ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂರು ವರ್ಷದಿಂದ ಕೇವಲ 118 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ ಅದರಲ್ಲಿ ಹಲವು ಆರೋಪಿಗಳಿಗೆ ಜಾಮಿನು ಸಿಕ್ಕಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ(ನಾರಯಣಗೌಡ ಬಣ) ಅಧ್ಯಕ್ಷ ಷಡಾಕ್ಷರಿ, ಮುಖಂಡರಾದ ಸುಮನ್, ಪ್ರಶಾಂತ್, ಅರುಣ್ಕುಮಾರ್, ಕುಮಾರ್, ಶಂಕರ್, ಪ್ರವೀಣ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.