ದಾವಣಗೆರೆ: ಭದ್ರಾ ಡ್ಯಾಂನಿಂದ ಭದ್ರಾ ನಾಲೆಗೆ ಜು.26ರಂದು ರಾತ್ರಿಯಿಂದಲೇ ನೀರು ಹರಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ, ಸಂಸದ ಜಿ.ಎಂ. ಸಿದ್ದೇಶ್ವರ್ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಕಾಡಾ ಸಮಿತಿ ಸಭೆಯನ್ನು ಜು.26ರಂದು ಕರೆದಿದ್ದು, ಅಂದಿನ ಸಭೆಯಲ್ಲಿ ನೀರು ಬಿಡುವ ಬಗ್ಗೆ ಚರ್ಚಿಸಲು ಸಮಿತಿ ನಿರ್ಧರಿಸಲಿದೆ. ಈ ಹಿನ್ನೆಲೆಯಲ್ಲಿ ಅದೇ ರಾತ್ರಿಯಿಂದಲೇ ಭದ್ರಾ ಡ್ಯಾಂನಿಂದ ಭದ್ರಾ ನಾಲೆಗೆ ನೀರು ಹರಿಸುವಂತೆ ಸಚಿವರು ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಅಚ್ಚುಕಟ್ಟು ಪ್ರದೇಶದಲ್ಲಿ 2014-15ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ನಾಲೆಗೆ ತಕ್ಷಣ ನೀರು ಬಿಡಬೇಕು. ಬೆಳೆ ಕ್ಷೇತ್ರೋತ್ಸವ ಪ್ರಕಟಿಸುವ ತೀರ್ಮಾನ ಕೈಗೊಳ್ಳುವಾಗ ಕಾಡಾ ಈ ಬಗ್ಗೆ ಗಮನ ಹರಿಸಬೇಕು. ಪೂರ್ವ ನಿಗದಿತ ಸಭೆಗಳಲ್ಲಿ ತಾವು ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಕಾಡಾ ಸಮಿತಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದರು.
ಶಾಲೆಗೆ ದೇಣಿಗೆ
ನ್ಯಾಮತಿ: ಇಲ್ಲಿಗೆ ಸಮೀಪದ ಗುಡ್ಡೇಹಳ್ಳಿ ಹತ್ತಿರದ ಅರಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅರಳೇಹಳ್ಳಿ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಚನ್ನಪ್ಪ ಹಾಗೂ ಪತ್ನಿ ತಾರಮ್ಮ ಒಂದು ಲಕ್ಷ ರು. ಶಾಶ್ವತ ನಿಧಿ ಠೇವಣಿ ಬಾಂಡ್ ದೇಣಿಗೆಯಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಿಗೆ ಸನ್ಮಾನ ಮತ್ತು ಬಡ ವಿದ್ಯಾರ್ಥಿಗಳಿಗೆ ನೋಟ್ಬುಕ್, ಲೇಖನ ಸಾಮಾಗ್ರಿಗಳನ್ನು ವಿತರಿಸಿದರು. ಎಸ್ಡಿಎಂಸಿ ಸದಸ್ಯರು, ಶಿಕ್ಷಕವೃಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.