ಧಾರವಾಡ

ಮತ ಚಲಾಯಿಸುವ ಮುನ್ನ...

ಧಾರವಾಡ:  ಇಂದು ಮತದಾನ. ರಾಜ್ಯದ 208 ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರು ಯೋಗ್ಯ ಅಭ್ಯರ್ಥಿಗಳನ್ನು ಚುನಾಯಿಸುವುದಕ್ಕಾಗಿ ತಮ್ಮ ಹಕ್ಕು ಚಲಾಯಿಸುವ ದಿನ.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಿಂತಲೂ ಸ್ಥಳೀಯ ಸಂಸ್ಥೆ ಚುನಾವಣೆ ಮತದಾರರಿಗೆ ಹೆಚ್ಚು ಪ್ರಾಮುಖ್ಯವಾದುದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವವರಲ್ಲಿ ಬಹುತೇಕರ ಬಗ್ಗೆ ಮತದಾರರಿಗೆ ಮಾಹಿತಿ ಇರುತ್ತದೆ. ತಮ್ಮ ಬಡಾವಣೆ ಅಥವಾ ಪಕ್ಕದ ಬಡಾವಣೆಯಲ್ಲಿರುವವರೇ ಚುನಾವಣೆ ಕಣದಲ್ಲಿರುತ್ತಾರೆ. ಇಂತಹ ಅಭ್ಯರ್ಥಿಗಳ ಪೂರ್ವಾಪರದ ಬಗ್ಗೆ ಮತದಾರರಿಗೆ ತಿಳಿವಳಿಕೆ ಇರುತ್ತದೆ. ಅಲ್ಲದೆ, ಈ ಅಭ್ಯರ್ಥಿಗಳು ಚುನಾವಣೆ ನಂತರ ಅತಿ ಸರಳವಾಗಿ ಸಾರ್ವಜನಿಕರಿಗೆ ಲಭ್ಯವಾಗುತ್ತಾರೆ. ಹೀಗಾಗಿ ತಮ್ಮ ಬಡಾವಣೆ ಪಕ್ಕದಲ್ಲಿಯೇ ವಾಸಿಸುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಚುನಾಯಿಸಬೇಕಾದರೆ ಮತದಾರ ಒಂದಿಷ್ಟು ಎಚ್ಚರಿಕೆ ವಹಿಸುವುದು ಅಗತ್ಯ. ಸರಳ, ಸಜ್ಜನ ಅಭ್ಯರ್ಥಿ ಆಯ್ಕೆ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಸಜ್ಜನಿಕೆ ಜೊತೆಗೆ ಸಾರ್ವಜನಿಕರ ಅಗತ್ಯಗಳಿಗೆ ಹೋರಾಡುವಂಥವರನ್ನೂ ಹುಡುಕಬೇಕಾಗಿದೆ. ಸಾಮಾನ್ಯ ಸಭೆಗಳಲ್ಲಿ ಧೈರ್ಯದಿಂದ ಎದ್ದು ನಿಂತು ತಮ್ಮ ವಾರ್ಡ್ ಸಮಸ್ಯೆ ಬಗ್ಗೆ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಚಾಣಾಕ್ಷರನ್ನು ಚುನಾಯಿಸಬೇಕಿದೆ.
ರಾಜಕೀಯ ಪಕ್ಷ ಯಾವುದೇ ಇರಲಿ, ಯೋಗ್ಯ ಅಭ್ಯರ್ಥಿಗೆ ಮತ ನೀಡುವುದು ಪ್ರತಿ ಮತದಾರನ ಕರ್ತವ್ಯ. ಸಂವಿಧಾನಾತ್ಮಾಕವಾಗಿ ಬಂದ ಮತದಾನದ ಹಕ್ಕನ್ನು ಅದೆಷ್ಟೋ ಮತದಾರರು ಚಲಾಯಿಸುವುದೇ ಇಲ್ಲ. ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ತಮ್ಮ ಜವಾಬ್ದಾರಿ ಏನು ಎಂಬುದರ ಬಗ್ಗೆ ಅರಿವಿದ್ದರೂ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಪ್ರತಿ ಚುನಾವಣೆಯಲ್ಲಿ ಅನೇಕರು ಎಡವುತ್ತಾರೆ. ಇದೇ ಕಾರಣಕ್ಕಾಗಿ ಚುನಾವಣೆಗಳಲ್ಲಿ ಮತದಾನ ಸಂಖ್ಯೆ ಕುಸಿಯುತ್ತ ಸಾಗುತ್ತಿದೆ. ಪ್ರತಿಶತ 100ರಷ್ಟಾಗಬೇಕಿದ್ದ ಮತದಾನ, ಪ್ರತಿಶತ 60, 50ಕ್ಕೆ ಕುಸಿಯುತ್ತಿದೆ. ಕೆಲ ಚುನಾವಣೆಗಳಲ್ಲಿ ಪ್ರತಿಶತ 50ಕ್ಕಿಂತಲೂ ಕಡಿಮೆ ಮತದಾನ ನಡೆದ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ.
ಐದು ವರ್ಷದ ಪಶ್ಚಾತ್ತಾಪ:  ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಗಳಲ್ಲಿ ಯೋಗ್ಯ ಅಭ್ಯರ್ಥಿಯನ್ನು ಚುನಾಯಿಸಲು ತೋರುವ ನಿರ್ಲಕ್ಷ್ಯತನಕ್ಕೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಸುಶಿಕ್ಷಿತ ಮತದಾರರಲ್ಲಿಯೂ ಇಂತಹ ನಿರ್ಲಕ್ಷ್ಯತನ ತೋರುವವರ ಸಂಖ್ಯೆ ಅಧಿಕ. ಇದರ ಪರಿಣಾಮವೇ ಅಯೋಗ್ಯ ಹಾಗೂ ಭ್ರಷ್ಟ ಅಭ್ಯರ್ಥಿಗಳು ಚುನಾಯಿತರಾಗುತ್ತಾರೆ. ಎಲ್ಲ ಕೆಲಸದಲ್ಲಿಯೂ ತಮ್ಮ ಸ್ವಾರ್ಥ ನೋಡುತ್ತಾರೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಸಾರ್ವಜನಿಕರು ಮೂಲ ಸೌಲಭ್ಯವಿಲ್ಲದೆ ಪರದಾಡುತ್ತಾರೆ. ಆಗ ಈ ನಮ್ಮ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ. ಮತದಾನದ ದಿನ ಕುಟುಂಬದವರೊಂದಿಗೆ ಪ್ರವಾಸಕ್ಕೆ ಅಥವಾ ಚಲನಚಿತ್ರ ವೀಕ್ಷಣೆಗೆ ತೆರಳದೆ, ಎಲ್ಲರೊಂದಿಗೆ ಮತಗಟ್ಟೆಗೆ ತೆರಳಿ ಯೋಗ್ಯ ಅಭ್ಯರ್ಥಿಗೆ ಮತ ನೀಡಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲವೆಂದು ಪಶ್ಚಾತ್ತಾಪ ಪಡುತ್ತಾರೆ. ಆದರೆ ಆಗಲೇ ಪರಿಸ್ಥಿತಿ ಕೈಮೀರಿರುತ್ತದೆ. ಹಾಲಿ ಅಭ್ಯರ್ಥಿ ಬದಲು ಮತ್ತೊಬ್ಬ ಯೋಗ್ಯರನ್ನು ಚುನಾಯಿಸಲು ಮತ್ತೆ ಐದು ವರ್ಷ ಕಾಯದೆ ಬೇರೆ ವಿಧಿ ಇಲ್ಲ. ಈ ರೀತಿಯ ದುಸ್ಥಿತಿ ಬಾರದಿರಲು ಮತದಾರ ಈಗಲೇ ಜಾಗೃತನಾಗಬೇಕು. ಕಾಲೇಜು-ಕಚೇರಿಗಳಿಗೆ ರಜೆ ಎಂಬ ಕಾರಣದಿಂದ ಬೇರೆಲ್ಲೋ ಮನರಂಜನೆಗೆ ತೆರಳುವ ಮುನ್ನ ಮತದಾರ ತನ್ನ ಹಕ್ಕು ಚಲಾಯಿಸುವುದು ಅತಿ ಅಗತ್ಯ. ಆ ಮೂಲಕ ತನ್ನ ವಾರ್ಡ್ ಹಾಗೂ ನಗರದ ಅಭಿವೃದ್ಧಿಗೆ ಸಹಕರಿಸಬೇಕು.

ಒಂದಿಷ್ಟು ಟಿಪ್ಸ್ ...  
 ಬೇಗ ಏಳಿ: ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನದ ಸಮಯ. ಹೊತ್ತೇರಿದಂತೆಲ್ಲ ಮತಗಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಹಾಗಾಗಿ ಬೆಳಗ್ಗೆ ಬೇಗನೇ ಎದ್ದು ಮತಗಟ್ಟೆಗೆ ಹೋಗಿ ನಿಮ್ಮ ಹಕ್ಕು ಚಲಾಯಿಸಿ.
 ವಯೋವೃದ್ಧರು: ವಯಸ್ಸಾದವರಂತೂ ಬೆಳಗ್ಗೆ ಬೇಗನೆ ಮತಗಟ್ಟೆಗೆ ಹೋದರೆ ಒಳ್ಳೆಯದು. ಇನ್ನೂ ತಂಪು ವಾತಾವರಣ ಇದ್ದಾಗ ಹಾಗೂ ಜನಸಂದಣಿ ಕಡಿಮೆ ಇದ್ದಾಗ ಮತ ಚಲಾಯಿಸಿ ಬಂದರೆ ಅನುಕೂಲ. ಇಲ್ಲದಿದ್ದರೆ ಸುಡುಬಿಸಿಲಲ್ಲಿ ಹಾಗೂ ಜನಂದಣಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ.
 ವಿದ್ಯುನ್ಮಾನ ಮತ ಯಂತ್ರ: ಮತದಾನ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನದ ಬಳಕೆಯಾಗುತ್ತಿದೆ. ಮತ ಚಲಾವಣೆ ಸಂದರ್ಭದಲ್ಲಿ ಗೊಂದಲವುಂಟಾದರೆ ಸ್ಥಳದಲ್ಲಿರುವ ಚುನಾವಣಾಧಿಕಾರಿಗಳ ಸಹಾಯ ಪಡೆದುಕೊಳ್ಳಬಹುದು.
     ನೀವು ಮತ ನೀಡಬೇಕೆಂದಿರುವವರ ಹೆಸರು ಮತ್ತು ಚಿಹ್ನೆಯ ಮುಂದಿರುವ ನೀಲಿ ಬಣ್ಣದ ಬಟನ್ ಒಮ್ಮೆ ಮಾತ್ರ ಒತ್ತಿ. ಈ ಹೆಸರಿನ ಎದುರಿಗಿರುವ ಕೆಂಪು ಬಣ್ಣದ ದೀಪ ಹತ್ತಿ ಆರುತ್ತದೆ. ಜೊತೆಗೆ ಬೀಪ್ ಶಬ್ದ ಬಂದರೆ ನಿಮ್ಮ ಮತ ಚಲಾವಣೆ ಆಗಿದೆ ಎಂದರ್ಥ.
 ಮತ್ತೊಬ್ಬರ ಸಹಾಯ: ನೀವು ವಿಕಲಚೇತನರಾಗಿದ್ದಲ್ಲಿ ಅಥವಾ ವಯೋವೃದ್ಧರಾಗಿದ್ದಲ್ಲಿ ಮತದಾನಕ್ಕೆ 18 ವರ್ಷದೊಳಗಿನವರ ನೆರವು ಪಡೆಯಬಹುದು. ನೆರವು ನೀಡುವ ನೆಪದಲ್ಲಿ ನಿಮ್ಮ ಯೋಚನೆಯ ದಿಕ್ಕು ಬದಲಾಯಿಸಲು ಬರುವವರ ಬಗ್ಗೆ ಎಚ್ಚರವಿರಲಿ.
 ನೀರು ಇರಲಿ: ಬಿಸಿಲಿರುವುದರಿಂದ ಮತಗಟ್ಟೆಗೆ ನೀರಿನ ಬಾಟಲಿ ತೆಗೆದುಕೊಂಡು ಹೋಗುವುದು ಉತ್ತಮ. ಜನಸಂದಣಿ ಹೆಚ್ಚಾಗಿ ತಾಸುಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಸಂದರ್ಭದಲ್ಲಿ ಒಂದಿಷ್ಟು ನೀರು ಕುಡಿಯಬಹುದು.
 ಮಕ್ಕಳೊಂದಿಗೆ ಹೋಗಬೇಡಿ: ಮತಗಟ್ಟೆಗೆ ಚಿಕ್ಕಮಕ್ಕಳೊಂದಿಗೆ ತೆರಳದೇ ಇರುವುದು ಉತ್ತಮ. ಬಿಸಿಲು ಹಾಗೂ ಸರದಿಯಲ್ಲಿ ತಾಸುಗಟ್ಟಲೆ ನಿಂತರೆ ಮಕ್ಕಳಿಗೆ ತೊಂದರೆ.ಹಾಗಾಗಿ ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟು ಹೋಗುವುದು ಉತ್ತಮ.
 ಪಕ್ಷಗಳ ವಾಹನ ಬೇಡ: ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಥವಾ ಏಜೆಂಟರು ನಿಮ್ಮನ್ನು ವಾಹನದಲ್ಲಿ ಕರೆದೊಯ್ಯಲು ಬಂದರೆ ಸ್ಪಷ್ಟವಾಗಿ ನಿರಾಕರಿಸಿ. ಬೇಕಿದ್ದಲ್ಲಿ ನಿಮ್ಮ ಅಥವಾ ಸಂಬಂಧಿಕರ ವಾಹನದಲ್ಲಿ ತೆರಳಿ ಮತದಾನ ಮಾಡಿ ಬನ್ನಿ.
 ಅಭ್ಯರ್ಥಿ ಬಗ್ಗೆ ಚರ್ಚಿಸಿ: ಮತದಾನಕ್ಕೆ ಮುಂಚೆ ಯೋಗ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಚರ್ಚಿಸಿ. ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳುವಂತೆ ಅಭ್ಯರ್ಥಿ ಯಾರೇ ಆಗಿದ್ದರೂ ಯೋಚನೆ ಮಾಡದೇ ನಿಗದಿತ ರಾಜಕೀಯ ಪಕ್ಷಕ್ಕೆ ಮತ ನೀಡಬೇಡಿ.
 ಆಮಿಷಕ್ಕೊಳಗಾಗಬೇಡಿ: ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಡ್ಡುವ ಆಮಿಷಕ್ಕೆ ಒಳಗಾಗಬೇಡಿ. ಹಣ-ಹೆಂಡ, ಸೀರೆ ಸೇರಿದಂತೆ ಎಲ್ಲ ಆಮಿಷಗಳನ್ನು ಸ್ಪಷ್ಟವಾಗಿ ನಿರಾಕರಿಸಿ. ಆಮಿಷಕ್ಕೊಳಗಾಗಿ ಮತ ನೀಡಿದರೆ ಅಯೋಗ್ಯ ಅಭ್ಯರ್ಥಿ ಚುನಾಯಿಸಿದ್ದರ ಹೊಣೆ ನಿಮ್ಮದಾಗುತ್ತದೆ.
 ರಜೆ ಮಜಾಗೆ ಕಡಿವಾಣ: ಮತದಾನ ನಡೆಯುವ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ರಜೆ ಸಿಕ್ಕ ತಕ್ಷಣ ಮತದಾನ ಮರೆತು ಬೇರೆಡೆ ಹೋಗುವುದು ಬೇಡ. ಯಾವುದಾದರೂ ಕೆಲಸಕ್ಕೆ ತೆರಳುವ ಮೊದಲು ಮತದಾನ ಮಾಡಿ.
 ಬೇರೆಡೆಯವರನ್ನು ಕರೆಸಿ: ಬೇರೆ ಊರಿನಲ್ಲಿರುವವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಅವರನ್ನು ಕರೆಯಿಸಿ. ಪ್ರತಿ ಮತವೂ ಮಹತ್ವದ್ದು. ಒಂದು ಮತದ ಆಧಾರದ ಮೇಲೂ ಸೋಲು-ಗೆಲುವು ನಿರ್ಧಾರವಾಗುತ್ತದೆ. ಹಾಗಾಗಿ ಸಂಬಂಧಿಕರನ್ನು ಕಡ್ಡಾಯವಾಗಿ ಕರೆಯಿಸಿ, ಮತದಾನ ಮಾಡಿಸಿ.
 ದೂರು ನೀಡಿ: ನಿರ್ದಿಷ್ಟ ಅಭ್ಯರ್ಥಿಗೇ ಮತ ನೀಡಬೇಕೆಂದು ಯಾರಾದರೂ ಬೆದರಿಕೆ ಹಾಕಿದರೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ. ಬೆದರಿಕೆ ಅಥವಾ ಆಮೀಷವೊಡ್ಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಯಾವುದೇ ಆಮಿಷಕ್ಕೊಳಗಾಗದೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವವಿದೆ. ಪ್ರತಿ ಮತವೂ ಮಹತ್ವದ್ದು. ಒಂದೇ ಒಂದು ಮತಕ್ಕೂ ಆಡಳಿತ ಪಕ್ಷವನ್ನು ಚುನಾಯಿಸುವ ಅಥವಾ ತಿರಸ್ಕರಿಸುವ ಮಹತ್ವವಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡಿ. ಯೋಗ್ಯ ಅಭ್ಯರ್ಥಿಯನ್ನು ಚುನಾಯಿಸಿ.
- ಡಾ೤ ಆನಂದ ಪಾಂಡುರಂಗಿ ಮನೋವೈದ್ಯರು, ಧಾರವಾಡ

ಯೋಗ್ಯ ಅಭ್ಯರ್ಥಿಗೆ ಮತ ನೀಡಿದರೆ ಮಾತ್ರ ಉತ್ತಮ ಪ್ರತಿನಿಧಿಗಳು ಆಡಳಿತಕ್ಕೆ ಬರುತ್ತಾರೆ. ಆ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಸ್ಥಾನಿಕ ಸರ್ಕಾರ ರಚನೆಗೊಂಡು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ. ಪ್ರತಿ ವಾರ್ಡ್‌ನಲ್ಲೂ ಮೂಲ ಸೌಲಭ್ಯ ದೊರಕುವ ಮೂಲಕ ನಗರ, ಪಟ್ಟಣಗಳು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತವೆ.
- ಪ್ರೊ ಅಶೋಕ ಶೆಟ್ಟರ,
ಪ್ರಾಚಾರ್ಯ, ಬಿವಿಬಿ ಎಂಜನಿಯರಿಂಗ್ ಕಾಲೇಜು, ಹುಬ್ಬಳ್ಳಿ
- ಆನಂದ ಅಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!