ಹುಬ್ಬಳ್ಳಿ: ಹಣಕ್ಕಾಗಿ ಧಾರ್ಮಿಕ ಸಂಸ್ಥೆಯೊಂದನ್ನು ಪರಭಾರೆ ಮಾಡುವುದು ಖಂಡನೀಯ. ಈ ನಿಟ್ಟಿನಲ್ಲಿ ವೀರಶೈವ ಧಾರ್ಮಿಕ ಮುಖಂಡರು ಹೋರಾಟ ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ ಎಂದು ಪೇಜಾವರಮಠದ ವಿಶ್ವೇಶ ತೀರ್ಥ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದ ಮಠವನ್ನು ವಿವಾದಿತ ನಿತ್ಯಾನಂದ ಸ್ವಾಮೀಜಿ ತನ್ನ ವಶಕ್ಕೆ ತೆಗೆದುಕೊಳ್ಳುವುದರ ವಿರುದ್ಧ ಅಲ್ಲಿನ ಲಿಂಗಾಯತ ಸಮುದಾಯ ಎತ್ತಿದ ಧ್ವನಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು, ಮಹಾಲಿಂಗೇಶ್ವರ ಮಠದ ಹಸ್ತಾಂತರಕ್ಕೆ ತಮ್ಮ ವಿರೋಧವಿದೆ ಎಂದರು.
ಮಠದ ಭಕ್ತರಿಂದ ವ್ಯಕ್ತವಾದ ಪ್ರತಿಭಟನೆ ತಮ್ಮ ಬೆಂಬಲವಿದೆ ಎಂದು ಹೇಳಿದ ಶ್ರೀಗಳು ಇಂತಹ ಸಂದರ್ಭದಲ್ಲಿ ತಮ್ಮ ಅಸಂತೋಷ, ಅಸಮಾಧಾನ ವ್ಯಕ್ತಪಡಿಸುವ ಹಕ್ಕು ಭಕ್ತರಿಗೆ ಇದೆ. ವೀರಶೈವ ಸಮುದಾಯ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಒಂದು ವೇಳೆ ಯಾವುದೇ ಹೋರಾಟಕ್ಕೆ ಬೆಂಬಲಿಸಿ ಎಂದು ವೀರಶೈವ ಸಮುದಾಯ ಬೆಂಬಲ ಕೇಳಿದರೆ ಖಂಡಿತವಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಇಳಿಯುವೆ ಎಂದರು.
ಮಠಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನವನ್ನು ಸ್ವಾಗತಿಸಿದ ಅವರು ಸರ್ಕಾರದಿಂದ ಲಭ್ಯವಾಗುವ ಅನುದಾನವನ್ನು ಮಠಗಳು ಸಾರ್ವಜನಿಕ ಹಿತಾಸಕ್ತಿಗೆ ಬಳಸಬೇಕು. ಸಾರ್ವಜನಿಕ ಉದ್ದೇಶಕ್ಕೆ ಸರ್ಕಾರದಿಂದ ಹಣಕಾಸು ನೆರವು ಹಕ್ಕು ಧಾರ್ಮಿಕ ಸಂಸ್ಥೆಗಳಿಗೆ ಇದೆ. ಆದರೆ ಈ ಅನುದಾನ ತೆರಿಗೆದಾರರು ಪಾವತಿಸಿರುವ ಹಣವಾಗಿರುವ ಕಾರಣ ಅನುದಾನದ ಬಳಕೆಯಲ್ಲಿ ಆಯಾ ಧಾರ್ಮಿಕ ಸಂಸ್ಥೆಗಳಿಗೆ ಜವಾಬ್ದಾರಿ ಇರಬೇಕು ಎಂದರು.