ಧಾರವಾಡ: ಅವಳಿ ನಗರದ ಮಧ್ಯೆ ನಿರ್ಮಿಸುತ್ತಿರುವ ಬಿಆರ್‌ಟಿಎಸ್ ಯೋಜನೆಗೆ ಆಸ್ತಿ ಕಳೆದುಕೊಳ್ಳುತ್ತಿರುವ ಹುಬ್ಬಳ್ಳಿ ಸಂತ್ರಸ್ತರಿಗೆ ಪ್ರತಿ ಚದರ ಅಡಿಗೆ ರು. 6,250 ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶನಿವಾರ ನಡೆದ ಬಿಆರ್‌ಟಿಎಸ್ ಯೋಜನೆಗೆ ಆಸ್ತಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರು ಹಾಗೂ ಬಿಆರ್‌ಟಿಸಿ ಯೋಜನೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಪರಿಹಾರ ಮೊತ್ತಕ್ಕೆ ಅಭ್ಯಂತರ ಇದ್ದಲ್ಲಿ ಲಿಖಿತವಾಗಿ ತಿಳಿಸುವಂತೆ ಸೂಚಿಸಿದರು. ಬಿಆರ್‌ಟಿಎಸ್ ಯೋಜನೆಗೆ ವಶಪಡಿಸಿಕೊಳ್ಳುವ ಜಾಗೆಯಲ್ಲಿರುವ ಕಟ್ಟಡ, ಕೊಳವೆ ಬಾವಿ, ಮರಗಳು ಸೇರಿದಂತೆ ಹಾನಿಯಾಗುವ ಪ್ರತಿಯೊಂದಕ್ಕೂ ಪರಿಹಾರ ನೀಡಲಾಗುವುದು. ಒಟ್ಟಿನಲ್ಲಿ ಒಂದು ಗುಂಟೆ ಜಾಗೆಗೆ ಸರಿಸುಮಾರು ರು. 75ರಿಂದ 80 ಲಕ್ಷ ಪರಿಹಾರ ದೊರೆಯಲಿದೆ. ಇದು ಪ್ರಸಕ್ತ ಮಾರುಕಟ್ಟೆಗೆ ಹೋಲಿಸಿದಲ್ಲಿ ಅಧಿಕವಾಗಿದೆ. ಕಾರಣ ಈ ಮೊತ್ತಕ್ಕೆ ಪ್ರತಿಯೊಬ್ಬ ಸಂತ್ರಸ್ತರು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು. ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ಹೊರಡಿಸಿ ಮೊದಲ ನೋಟಿಫಿಕೇಶನ್ ದಿನದಿಂದ ಇದುವರೆಗೆ ನಡೆದ ಆಸ್ತಿ ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಪ್ರಕರಣದ 2.5 ಪಟ್ಟು ಅಧಿಕ ಮೊತ್ತ ನಿಗದಿ ಮಾಡಲಾಗಿದೆ. ಜತೆಗೆ ತೆರವು ಕಾರ್ಯಾಚರಣೆಯಲ್ಲಿ ಹಾನಿಗೆ ಒಳಗಾಗುವ ಮನೆ, ಅಂಗಡಿ ಸೇರಿದಂತೆ ವಿವಿಧ ಇಮಾರುತಗಳ ದುರಸ್ತಿಗೆ ಅಂದಿನ ನಿರ್ಮಾಣ ವೆಚ್ಚದ ಶೇ. 25ರಷ್ಟು ಪರಿಹಾರ ಸಹ ನೀಡಲಾಗುವುದು. ಒಟ್ಟಿನಲ್ಲಿ ಈ ಯೋಜನೆಗೆ ಆಸ್ತಿ ಕಳೆದುಕೊಳ್ಳುವವರಿಗೆ ಅನ್ಯಾಯವಾಗದು. ಸಭೆಯಲ್ಲಿ ಹಾಜರಿದ್ದ ಕೆಲವರು ಹುಬ್ಬಳ್ಳಿ ಹೊಸೂರು ಪ್ರದೇಶದಲ್ಲಿರುವ ವ್ಯಾಪಾರಿ ಮಳಿಗೆ, ಹೊಟೇಲ್ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಆರ್‌ಟಿಸಿ ಯೋಜನೆಯ ಅಧಿಕಾರಿ ಸಿ.ಎಂ. ನೂರಮನ್ಸೂರ್ ಭರವಸೆ ನೀಡಿದರು.
ತುಂಬಿದ ತುಂಗೆ, ವರದಾ ನದಿಗಳು: ಸಂಪರ್ಕ ಕಡಿತ
ಹಾವೇರಿ/ ಗುತ್ತಲ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಯಿಂದ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ವರದಾ ಮತ್ತು ತುಂಗಭದ್ರಾ ನದಿಗಳ ನೀರಿನ ಪ್ರವಾಹ ಹೆಚ್ಚಿದ್ದು, ಸಮೀಪದ ಬಹುತೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ.