ಕುಂದಗೋಳ: ತಾಲೂಕಿನ ಯಲಿವಾಳ ಗ್ರಾಮದ ರೈತರ ಹೊಲಕ್ಕೆ ಹೋದಾಗ ಹಾವು ಕಚ್ಚಿ ಮೃತಪಟ್ಟ ಷಣ್ಮುಖಗೌಡ ವೀರನಗೌಡ ಚಿಕ್ಕನಗೌಡ್ರ ಎಂಬ ರೈತನಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಮುಖ್ಯಮಂತ್ರಿಗಳು ರು. 5 ಲಕ್ಷ ಪರಿಹಾರ ಹಾಗೂ ಕೃಷಿ ಇಲಾಖೆಯಿಂದ ರು. 1 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕು ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ತಹಸೀಲ್ದಾರ್ ಬಿ.ಎಂ. ಬೇವಿನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎನ್.ಬಿ. ನೇರೆಗಲ್ ಮಾತನಾಡಿ, ಷಣ್ಮುಖಗೌಡ ಕಡುಬಡತನದ ರೈತನಾಗಿದ್ದು, ಭಾನುವಾರ ಹೊಲದಲ್ಲಿ ಬಿಟಿ ಹತ್ತಿ ಬೆಳೆಗೆ ಔಷಧಿ ಸಿಂಪರಣೆ ಮಾಡುವ ಸಮಯ ಆಕಸ್ಮಿಕವಾಗಿ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಈತನೇ ಮನೆಗೆ ಆಧಾರ ಸ್ತಂಭವಾಗಿದ್ದು, ಈ ಕುಟುಂಬ ಕಣ್ಣಿರಿನಲ್ಲಿ ಕೈ ತೋಳೆಯುತ್ತಿದ್ದು, ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಬಿ.ಎಂ. ಬೇವಿನಕಟ್ಟಿ ಮನವಿ ಸ್ವೀಕರಿಸಿ ಮಾತನಾಡಿ, ಕೃಷಿ ಸಮಾಜದಿಂದ ಕೂಡಲೇ ರು. 1 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಮಾಣಿಕ್ಯ ಚಿಲ್ಲೂರ, ಶಿವಾನಂದ ಕಟಗಿ, ರುದ್ರಪ್ಪ ಕಿರೇಸೂರು, ಎಸ್.ಜಿ. ಪಾಟೀಲ, ಪೃಥ್ವಿರಾಜ ಕಾಳೆ, ಗಣೇಶ ನಾಗಠಾನ, ಅಣ್ಣಪ್ಪ ಇಟಗಿ, ಚಂದ್ರು ಕಟ್ಣೂರ, ಬಿ.ವಿ. ದ್ಯಾಮನಗೌಡ್ರ ಇದ್ದರು.