ಪ್ರಕಾಶ ಎಸ್. ಶೇಟ್
ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಗೆ ಸಂಬಂಧಪಟ್ಟ ಸಾರ್ವಜನಿಕ ಅಹವಾಲು ಸ್ವೀಕರಿಸುವ 'ಜನಮಿತ್ರ ಯೋಜನೆ' ಸದ್ಯಕ್ಕೆ ಮಿತ್ರತ್ವ ಕಳೆದುಕೊಂಡಿದೆ. ಕಳೆದ ಹಲವು ದಿನಗಳಿಂದ ಜನಮಿತ್ರ ಯೋಜನೆಯ ಲಾಭ ಪ್ರಯಾಣಿಕರಿಗೆ ಸಿಗದಾಗಿದೆ.
ಸಾರ್ವಜನಿಕ ಅಹವಾಲು ಸ್ವೀಕರಿಸುವ ಯೋಜನೆ ಇದಾಗಿದ್ದು. 1800-425-1836 ಎಂಬ ಟೋಲ್ ಫ್ರೀ ಸೌಲಭ್ಯವನ್ನು ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿತ್ತು. ಸಾರ್ವಜನಿಕರು ಹಾಗೂ ಸಂಸ್ಥೆ ಸಿಬ್ಬಂದಿ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನ್ನು ತಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ಮೂಲಕ ಉಚಿತ ಕರೆ ಮಾಡಿ ಪಡೆಯಬಹುದಾಗಿತ್ತು.
ಹೆದರಿಕೆ ಇತ್ತು: ಟೋಲ್ ಫ್ರೀ ವ್ಯವಸ್ಥೆ ಸಾರಿಗೆ ಸಂಸ್ಥೆ ಅಧಿಕಾರಿ ವರ್ಗ ಸೇರಿದಂತೆ ಸಿಬ್ಬಂದಿಯಲ್ಲಿ ಒಂದಿಷ್ಟು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂಬ ಭಯ ಹುಟ್ಟು ಹಾಕಿತ್ತು. ಪ್ರಮುಖವಾಗಿ ಚಾಲಕರು, ನಿರ್ವಾಹಕರು ಅನೇಕ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು, ಜಗಳ ಕಾಯುವುದು ಮಾಡುತ್ತಾರೆ. ಕೆಲವರು ಕುಡಿದ ಮತ್ತಿನಲ್ಲಿ ಬಸ್ ಚಾಲನೆ ಮಾಡುವುದು ಇನ್ನಿತರ ದುರ್ವರ್ತನೆ ತೋರುತ್ತಿರುತ್ತಾರೆ ಇಂಥವರ ಬಗ್ಗೆ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಪ್ರಯಾಣಿಕರು ದೂರುತ್ತಿದ್ದರು. ಹೀಗಾಗಿ ಸಿಬ್ಬಂದಿ ಹದ್ದುಮೀರಿ ವರ್ತಿಸುವುದು ಕೊಂಚ ತಗ್ಗಿತ್ತು.
ಹಳೆ ಚಾಳಿ ಶುರು: ಆದರೀಗ ಟೋಲ್ ಫ್ರೀ ನಂಬರ್ ಬಂದ್ ಆಗಿದ್ದೆ ತಡ ಅನೇಕ ಡ್ರೈವರ್, ಕಂಡಕ್ಟರ್‌ಗಳು ಹಳೆ ಚಾಳಿ ಶುರು ಮಾಡಿಕೊಂಡಿದ್ದಾರೆ. ಹೇಳುವವರು ಕೇಳುವವರು ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇಂಥವರ ವರ್ತನೆಯಿಂದ ಬೇಸತ್ತ ಪ್ರಯಾಣಿಕರು ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ನೀಡಲು ಮುಂದಾದರೆ ದೂರವಾಣಿ ರಿಂಗಣಿಸುತ್ತದೆಯಾದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೇ ಸಾರಿಗೆ ಸಂಸ್ಥೆಗೆ ಸಂಬಂಧಿಸಿದಂತೆ ಇತರ ಮಾಹಿತಿ ಪಡೆಯಲೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಬಿಎಸ್ಸೆಎನ್ನೆಲ್ ಕಾಟದಿಂದ ಬಂದ್: ಅಸಲಿಗೆ ಟೋಲ್ ಫ್ರೀ ಜನಮಿತ್ರ ಯೋಜನೆ ಬಂದ್ ಆಗಲು ಬಿಎಸ್ಸೆನ್ನೆಲ್ ಕಾರಣ. ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿರುವ ಜನಮಿತ್ರ ಕಚೇರಿಗೆ ದೂರವಾಣಿ ಸೌಲಭ್ಯ ಕಲ್ಪಿಸಿಕೊಡಲು ಕೆಎಸ್ಸಾರ್‌ಟಿಸಿ ಅಧಿಕಾರಿಗಳು ಕೋರಿದ್ದಾರೆ. ಪ್ರಸ್ತುತ ಇದ್ದ ಲೈನ್ ಹಾಳಾಗಿದೆ. ಇದಕ್ಕೆ ಮತ್ತೊಂದು ಲೈನ್ ಕಲ್ಪಿಸಿ ಕೊಡಬೇಕಾದರೆ ಗೋಕುಲ ರಸ್ತೆ ಮಧ್ಯದಲ್ಲಿ ತಗ್ಗು ತೋಡಿ ಲೈನ್ ಹಾಕಬೇಕಾಗುತ್ತದೆ. ಈ ಕಾರ್ಯಕ್ಕಾಗಿ ಈಗಾಗಲೇ ನಾಲ್ಕೈದು ಬಾರಿ ಕೆಎಸ್ಸಾರ್‌ಟಿಸಿ ಅಧಿಕಾರಿಗಳು ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದರೂ ಅವರು ಸಕಾಲಕ್ಕೆ ಬಂದು ಕೆಲಸ ಆರಂಭಿಸುತ್ತಿಲ್ಲ. ನಿತ್ಯ ಸಬೂಬು ಹೇಳುತ್ತಿದ್ದಾರೆ. ಹೀಗಾಗಿಯೇ ಜನಮಿತ್ರ ಯೋಜನೆ ಲಾಭ ಸಾರ್ವಜನಿಕರಿಗೆ ಸಿಗದಾಗಿದೆ.
ಪ್ರಯಾಣಿಕರಿಗೆ ಅನುಕೂಲ
ಟೋಲ್ ಫ್ರೀ ಸೌಲಭ್ಯ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು. ಬಸ್ ಸರಿಯಾದ ಸಮಯಕ್ಕೆ ಬಾರದಿದ್ದಲ್ಲಿ ಬಸ್ ಬುಕಿಂಗ್ ಸೇರಿದಂತೆ ಟೂರ್‌ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿತ್ತು. ಪ್ರಮುಖವಾಗಿ ಸಾರಿಗೆ ಸಂಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆ ಮತ್ತವರ ಬಗ್ಗೆ ಮಾಹಿತಿ ಸೇರಿದಂತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಬಗೆಯ ಸಮಸ್ಯೆಗಳಿದ್ದರೂ ಟೋಲ್ ಫ್ರೀಗೆ ಕರೆ ಮಾಡಿ ತೋಡಿಕೊಳ್ಳಬಹುದಿತ್ತು. ಇದರಿಂದಾಗಿ ಜನರಿಗೆ ಪರಿಹಾರವೂ ತಕ್ಷಣ ಲಭ್ಯವಾಗುತ್ತಿತ್ತು. ಒಂದೊಮ್ಮೆ ಬಸ್ ತಡವಾಗಿ ಬರುವುದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಇದಲ್ಲದೇ ಎಲ್ಲ ಬಗೆಯ ಸಮಸ್ಯೆ ಅಥವಾ ಮಾಹಿತಿಗೆ ತಕ್ಷಣ ಸ್ಪಂದನೆ ಸಿಗುತ್ತಿತ್ತು.