ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 21
ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಜವಾಬ್ದಾರಿ ಶಾಲೆಗಳಿಗೇ ಸೇರಿದ್ದು ಎಂದಿರುವ ಸರ್ಕಾರ, ಲೈಂಗಿಕ ದೌರ್ಜನ್ಯ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ರಚಿಸಿದ್ದು, ಶಾಲೆಗಳಿಗೆ ಕಳುಹಿಸಲು ನಿರ್ಧರಿಸಿದೆ. ಏತನ್ಮಧ್ಯೆ ಹುಬ್ಬಳ್ಳಿಯ ಆಕ್ಸ್ಫರ್ಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ತಪ್ಪಿಸಲು ನಾಲ್ಕು ವರ್ಷಗಳ ಹಿಂದೆಯೇ ಮಾದರಿ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳ ಮೇಲೆ ಕ್ಯಾಮೆರಾ ಕಣ್ಣಿಡಲಾಗಿದೆ.
ಹೌದು, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಿರುವ ಸರ್ಕಾರ ಒಂದೆಡೆಯಾದರೆ, ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಆಕ್ಸ್ಫರ್ಡ್ ಕಾಲೇಜು ನಾಲ್ಕು ವರ್ಷಗಳ ಹಿಂದೆಯೇ (2011) ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಚಿಂತನೆ ನಡೆಸಿ ಮಾದರಿ ಕೆಲಸ ಮಾಡಿದೆ.
ಆಕ್ಸ್ಫರ್ಡ್ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗರು. ಇದರೊಟ್ಟಿಗೆ ಹೊರ ರಾಜ್ಯದ ವಿದ್ಯಾರ್ಥಿಗಳೂ ಬರುತ್ತಾರೆ. ಇಂಥ ಸಂದರ್ಭದಲ್ಲಿ ಪ್ರಮುಖವಾಗಿ ಹಳ್ಳಿಯ ವಿದ್ಯಾರ್ಥಿನಿಯರು ರ್ಯಾಗಿಂಗ್, ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದರಿತು ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ, ಸುರಕ್ಷತೆಯ ವಿಧಾನಗಳನ್ನು ಕಾಲೇಜಿನಲ್ಲಿ ಅಳವಡಿಸಿದ್ದರು.
32 ಸಿಸಿ ಕ್ಯಾಮೆರಾ: ಆಕ್ಸ್ಫರ್ಡ್ ಕಾಲೇಜ್ ಕ್ಯಾಂಪಸ್ ಒಳಗೂ ಹೊರಗೂ ಕ್ಯಾಮೆರಾ ಕಣ್ಣಿಡಲಾಗಿದೆ. ಕಾಲೇಜ್ ಗೇಟ್ ಬಳಿ, ಬೇಸ್ಮೆಂಟ್ನಲ್ಲಿ, ಕಂಪೌಂಡ್ ಬಳಿ, ಕಾರಿಡಾರ್ನಲ್ಲಿ, ಪಾರ್ಕಿಂಗ್ ಸ್ಥಳದಲ್ಲಿ, ಕ್ಲಾಸ್ರೂಮ್, ಸ್ಟಾಫ್ ರೂಮ್ ಸೇರಿದಂತೆ ಶೌಚಾಲಯವೊಂದನ್ನು ಬಿಟ್ಟು ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಒಟ್ಟಾರೆಯಾಗಿ 32 ಕ್ಯಾಮೆರಾಗಳನ್ನು ಕಾಲೇಜಿನಲ್ಲಿ ಅಳವಡಿಸಲಾಗಿದ್ದು, ಎಲ್ಲ ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ಸೆರೆಯಾಗುವ ದೃಶ್ಯಗಳನ್ನು ಕೊಠಡಿಯೊಂದರಲ್ಲಿ ಒಬ್ಬ ಸಿಬ್ಬಂದಿ ವೀಕ್ಷಿಸುತ್ತಿರುತ್ತಾರೆ.
ಒಂದೊಮ್ಮೆ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಗಲಾಟೆ ಮಾಡಿದ್ದು ಕಂಡು ಬಂದಲ್ಲಿ ತಕ್ಷಣ ಅವರನ್ನು ಕರೆದು ವಿಚಾರಣೆಗೊಳಪಡಿಸಲಾಗುತ್ತದೆ. ಈ ಭಯದಿಂದ ವಿದ್ಯಾರ್ಥಿಗಳ ಅಸಭ್ಯವಾಗಿ ನಡೆದುಕೊಳ್ಳುವುದೇ ಇಲ್ಲ. ಜತೆಗೆ ಇತರರೂ ಕಾಲೇಜ್ ಕ್ಯಾಂಪಸ್ನಲ್ಲಿ ಸೇಫ್ ಆಗಿದ್ದಾರೆ.
ಅಶ್ಲೀಲ್ ವೆಬ್ಸೈಟ್ಗೆ ಕಡಿವಾಣ: ಇನ್ನು, ಕಾಲೇಜ್ ವಿದ್ಯಾರ್ಥಿಗಳ ಬಳಕೆಗಾಗಿ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಯಿದೆ. ಈ ಕಂಪ್ಯೂಟರ್ಗಳ ಮೂಲಕ ವಿದ್ಯಾರ್ಥಿಗಳು ಮೇಲ್ಚೆಕ್ ಮಾಡಬಹುದು, ಗೂಗಲ್ ಸರ್ಜ್ ಮೂಲಕ ಜ್ಞಾನ ಪಡೆಯಬಹುದು. ಆದರೆ ಅಶ್ಲೀಲ್ ವೆಬ್ಸೈಟ್ಗಳಿಗೆ ಕಡಿವಾಣ ಹಾಕಲಾಗಿದೆ.
ಜಾಮರ್ ಹಾಕಲಾಗಿತ್ತು: ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾಲೇಜ್ ಕ್ಯಾಂಪಸ್ನಲ್ಲಿ ಮೊಬೈಲ್ ಬಳಕೆ ಮಾಡದಂತೆ ಜಾಮರ್ ಅಳವಡಿಸಲಾಗಿತ್ತು. ಇದರಿಂದಾಗಿ ಮೊಬೈಲ್ ಮುಖಾಂತರವೂ ವಿದ್ಯಾರ್ಥಿಗಳು ಅಶ್ಲೀಲ್ ವೆಬ್ಸೈಟ್ ಬಳಸಲಾಗದಂತೆ ತಡೆಯಲಾಗಿತ್ತು. ಆದರೆ ಪಾಲಕರು ತಮ್ಮ ಮಕ್ಕಳೊಂದಿಗೆ ಮಾತನಾಡಲು ತೊಂದರೆಯಾಗುತ್ತದೆ ಎಂದು ಕೋರಿದ್ದರಿಂದ ಜಾಮರ್ ತೆಗೆಸಲಾಗಿದೆ.
ಮಾಹಿತಿ ಪರಿಶೀಲನೆ: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ಪರಿಪೂರ್ಣ ಮಾಹಿತಿ ಪಡೆಯಲಾಗುತ್ತದೆ. ವಿದ್ಯಾರ್ಥಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ ಪರಿಚಿತರ ಪತ್ರ, ಮತ್ತವರ ಭಾವಚಿತ್ರ, ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆಯಲ್ಲದೇ, ವಿದ್ಯಾರ್ಥಿ ನೀಡಿರುವ ಮಾಹಿತಿ ಸರಿಯಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಲಾಗುತ್ತದೆ.
ಎಲ್ಲ ಶಾಲಾ-ಕಾಲೇಜುಗಳಲ್ಲಿ ಇಂಥದ್ದೇ ಕ್ರಮ ಕೈಗೊಂಡಲ್ಲಿ ಬಹುಪಾಲು ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯ ತಡೆಯಬಹುದೇನೋ? ಈ ನಿಟ್ಟಿನಲ್ಲಿ ಆಕ್ಸ್ಫರ್ಡ್ ಕಾಲೇಜ್ ಮಾದರಿಯಾಗಿ ನಿಂತಿದೆ.
-ಪ್ರಕಾಶ ಎಸ್. ಶೇಟ್