ನವಲಗುಂದ: ನಕಲಿ ಕನಕ ಹತ್ತಿ ಬೀಜದ ಪರಿಹಾರ ಧನದ ಚೆಕ್ ವಿತರಣೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ತಾರತಮ್ಯವಾಗಿದೆ. ಪ್ರತಿ ಹೆಕ್ಟೇರ್ನಂತೆ ಪರಿಹಾರಧನ ವಿತರಿಸುತ್ತೇವೆ ಎಂದು ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ ಸ್ಪಷ್ಟಪಡಿಸಿದ್ದಾರೆ.
ರೈತ ಸೇನಾ ಕರ್ನಾಟಕ ಸಂಘಟನೆಯವರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಚೆಕ್ ವಿತರಣೆಯಲ್ಲಿನ ತಾರತಮ್ಯದ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದರು. ತಾಲೂಕಿಗೆ ಒಟ್ಟು 4237 ಹೆಕ್ಟೇರ್ ಪ್ರದೇಶಕ್ಕೆ ಪ್ರತಿ ಹೆಕ್ಟೇರ್ಗೆ ರು. 6 ಸಾವಿರದಂತೆ ರು. 2.54 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು ತಮ್ಮದೇ ಮಾನದಂಡ ರೂಪಿಸಿಕೊಂಡು ಖಾತೆಗೆ ರು. 6 ಸಾವಿರ ಹಾಗೂ ಅದಕ್ಕೂ ಕಡಿಮೆ ಹಣದ ಚೆಕ್ಗಳನ್ನು ನೀಡಿದ್ದಾರೆ. ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ಮಾನದಂಡದಡಿ ಚೆಕ್ ವಿತರಣೆ ಮಾಡಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕೆಂದು ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವಿರೇಶ ಸೋಬರದಮಠ, ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಅಂಬಲಿ ತಹಸೀಲ್ದಾರ್ ನವೀನ ಹುಲ್ಲೂರ ಅವರಿಗೆ ಒತ್ತಾಯಿಸಿದರು.
ಈ ಕುರಿತು ತಹಸೀಲ್ದಾರ್ ನವೀನ ಹುಲ್ಲೂರ ಸಹಾಯಕ ಕೃಷಿ ನಿರ್ದೇಶಕ ವಿ.ವಿ. ವಿಠ್ಠಲರಾವ್ ಅವರನ್ನು ಕಾರ್ಯಾಲಯಕ್ಕೆ ಕರೆಸಿ ಕೂಲಂಕಷವಾಗಿ ಚರ್ಚೆ ನಡೆಸಿದರು. 4237 ಹೆಕ್ಟೇರ್ ಪ್ರದೇಶದ ರೈತರ ಹೆಸರಿನ ಪಟ್ಟಿಯಂತೆಯೇ ಪ್ರತಿ ಹೆಕ್ಟೇರ್ಗೆ ರು. 6 ಸಾವಿರದಂತೆ ಲೆಕ್ಕ ಮಾಡಿ ಚೆಕ್ ವಿತರಣೆ ಮಾಡುತ್ತೇವೆಂದು ಭರವಸೆ ನೀಡಿದರು. ರೈತ ಮುಖಂಡರಾದ ಶಂಕರ ಗಾಣಿಗೇರ, ದಾವಲ್ ಖುದ್ದಣ್ಣವರ, ಎಂ.ಬಿ. ಮುಗಳಿ ಇದ್ದರು.