ಧಾರವಾಡ

ಸಂಸ್ಕೃತದ ತಿರಸ್ಕಾರ: ಭೈರಪ್ಪ ಖೇದ

ಹುಬ್ಬಳ್ಳಿ: ಕರ್ನಾಟಕದಲ್ಲಿ ಸಂಸ್ಕೃತದ ಬಗ್ಗೆ ಅಲಕ್ಷ್ಯವಲ್ಲ, ತಿರಸ್ಕಾರ ಭಾವನೆ ಬಂದಿರುವುದು ಖೇದಕರ. ಕನ್ನಡ ವಿದ್ಯಾವಂತರು, ಕನ್ನಡ ವಿಶ್ವ ವಿದ್ಯಾಲಯದ ಕನ್ನಡ ಉಪನ್ಯಾಸಕರಲ್ಲೂ ಸಂಸ್ಕೃತ ಭಾಷೆಯ ಕಲಿಕೆ, ಕಲಿಸುವ ಆಸಕ್ತಿ ಇಲ್ಲವಾಗಿದೆ ಎಂದು ಸರಸ್ವತಿ ಸಮ್ಮಾನ ಪುರಸ್ಕೃತ ಖ್ಯಾತ ಕಾದಂಬರಿಕಾರ ಡಾ೤ ಎಸ್.ಎಲ್. ಭೈರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕೃಷ್ಣರಾವ್ ಕಬ್ಬೂರ ಸಭಾಗೃಹದಲ್ಲಿ ಮಂಗಳವಾರ ಪ್ರೊ೤ ಶ್ರೀನಿವಾಸ ತೋಫಖಾನೆ ದ್ವಿತೀಯ ಪುಣ್ಯತಿಥಿ ಅಂಗವಾಗಿ, ತೋಫಖಾನೆ ಕೈ ಬರಹದ ಕೃತಿ 'ಯುಗಧರ್ಮ' ಬಿಡುಗಡೆಗೊಳಿಸಿದ ಭೈರಪ್ಪ, ಕನ್ನಡ ಉಪನ್ಯಾಸರಲ್ಲಿ ಅನೇಕರಿಗೆ ಶುದ್ಧ ಕನ್ನಡ ಬರೆಯಲು ಬರುತ್ತಿಲ್ಲ. ಇದಕ್ಕೆ ಸಂಸ್ಕೃತ ಜ್ಞಾನವಿಲ್ಲದಿರುವುದೇ ಕಾರಣ. ಈ ಬಗ್ಗೆ ಅವರಿಗೆ ತಿಳಿ ಹೇಳಿದರೆ ಸಂಸ್ಕೃತವೇಕೆ ಬೇಕು ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ. ಇಂಥವರಿಂದ ಏನು ನಿರೀಕ್ಷಿಸಲು ಸಾಧ್ಯ? ಹೀಗಾದರೆ ಸಂಸ್ಕೃತಿ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪುಸ್ತಕಗಳಿದ್ದೂ ಓದಲಿಲ್ಲ: ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂಎ ಪದವಿ ಪಡೆಯಬೇಕಾದರೆ ಸಂಸ್ಕೃತ ಕಡ್ಡಾಯವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿತ್ತು. ಛಂದಸ್ಸು, ಕನ್ನಡ ಕಾವ್ಯದಲ್ಲಿ ಹಿಡಿತವಿರುತ್ತಿತ್ತು ಎಂದ ಭೈರಪ್ಪ, ತಾವು ಪರ್ವ ಬರೆಯುವ ಪೂರ್ವದಲ್ಲಿ ಪ್ರಾಚೀನ ಭಾರತೀಯ ಸಮಾಜಶಾಸ್ತ್ರದ ಬಗ್ಗೆ ಓದಿ ತಿಳಿಯಲು ಇದೇ ಮೈಸೂರು ವಿವಿಗೆ ಹೋಗಿ, ಪುಸ್ತಕಗಳ ಬಗ್ಗೆ ಸಮಾಜಶಾಸ್ತ್ರದ ಉಪನ್ಯಾಸಕರಲ್ಲಿ ಕೇಳಿದರೆ ಮಾಹಿತಿಯಿಲ್ಲ ಎಂದರು. ಓರ್ವ ಉಪನ್ಯಾಸಕರು ತಾವು ಆಧುನಿಕ ಭಾರತೀಯ ಸಮಾಜ ಶಾಸ್ತ್ರ ಬೋಧಿಸುವವರು. ಪ್ರಾಚೀನ ಸಮಾಜಶಾಸ್ತ್ರದ ಬಗ್ಗೆ ಗೊತ್ತಿಲ್ಲ ಎಂದರು. ಪ್ರಾಚೀನ ಸಮಾಜಶಾಸ್ತ್ರ ಅರಿಯದೆ, ಆಧುನಿಕ ಸಮಾಜಶಾಸ್ತ್ರ ಹೇಗೆ ಅರಿತುಕೊಂಡಿರಿ ಎಂದು ಕೇಳಿದರೆ ಅವರಲ್ಲಿ ಉತ್ತರವಿರಲಿಲ್ಲ. ಆ ಬಳಿಕ ದೆಹಲಿಯ ಉಪನ್ಯಾಸಕರೊಬ್ಬರನ್ನು ಸಂಪರ್ಕಿಸಿ ಪುಸ್ತಕಗಳ ಹೆಸರು ಪಟ್ಟಿ ಮಾಡಿಕೊಂಡೆ. ಆ ಪುಸ್ತಕಗಳು ಮೈಸೂರು ವಿವಿಯಲ್ಲೇ ಸಿಕ್ಕವು. ಸಂಸ್ಕೃತ ಜ್ಞಾನವಿಲ್ಲದೆ ಪ್ರಾಚೀನ ಭಾರತದ ಬಗ್ಗೆ ತಿಳಿಯಲಾಗದು ಎಂದು ಭೈರಪ್ಪ ಹೇಳಿದರು.
ಮುಂಬೈ ಪ್ರಾಂತ್ಯವಿದ್ದಾಗ ಸಂಸ್ಕೃತ ಕಲಿಕೆ ಉತ್ತಮವಾಗಿತ್ತು. ಮದ್ರಾಸಿನ ಡಿಎಂಕೆಯವರು ದ್ರಾವಿಡಿಯನ್ ಚಳವಳಿ ಆರಂಭಿಸಿದ ಮೇಲೆ ಸಂಸ್ಕೃತ ಕಲಿಕೆ ಕಡಿಮೆಯಾಗುತ್ತಾ ಬಂತು. ಸಂಸ್ಕೃತ ನಮಗ್ಯಾಕೆ ಬೇಕು ಎನ್ನುವಂತೆ ತಮಿಳಿಯನ್ನರು ಭಿನ್ನರಂತೆ ವರ್ತಿಸಿದ ಲುಕ್ಸಾನು ನಾವಿಂದು ಅನುಭವಿಸುತ್ತಿದ್ದೇವೆಂದು ಬೇಸರ ವ್ಯಕ್ತ ಪಡಿಸಿದ ಭೈರಪ್ಪ, ನವೋದಯ ಕಾಲ ಘಟದಲ್ಲಿ ಸಾಕಷ್ಟು ಕವಿಗಳು ಹೆಸರುವಾಸಿಯಾದರು. ಇದಕ್ಕೆ ಕಾರಣ ಅವರು ಸಂಸ್ಕೃತ ಅರಿತಿದ್ದು. ಸಂಸ್ಕೃತ ಅರಿಯದೆ ನಾವು ಶುದ್ಧ ಕನ್ನಡ ಬರೆಯಲು ಸಾಧ್ಯವೇ ಇಲ್ಲ ಎಂದರು.
ತೋಫಖಾನೆ ಸಂಸ್ಕೃತ ಗುರು: ಹುಬ್ಬಳ್ಳಿ ನೆಲದಿಂದಲೇ ನಾನು ಸಂಸ್ಕೃತ ಕಲಿಯಲು ಆರಂಭಿಸಿದ್ದು, ಶ್ರೀನಿವಾಸ ತೋಫಖಾನೆಯವರೇ ನನ್ನ ಸಂಸ್ಕೃತದ ಗುರುಗಳು. ಹುಬ್ಬಳ್ಳಿಯ ಮೊದಲ ಮಿತ್ರ ಕೂಡ ತೋಫಖಾನೆ. ಅವರೇ ನನಗೆ ಸಂಸ್ಕೃತ ಕಲಿಯಲು ಗುರುಗಳನ್ನು ಗುರುತು ಮಾಡಿಕೊಟ್ಟದ್ದು. ಅವರ-ನನ್ನ ಸ್ನೇಹ ಆಳವಾಗಿತ್ತು. ವಂಶವೃಕ್ಷದ ಹಸ್ತ ಪ್ರತಿಯನ್ನು ತೋಫಖಾನೆಯವರೇ ಓದಿದ್ದು ಎಂದು ಭೈರಪ್ಪ ಸ್ಮರಿಸಿಕೊಂಡರು.
26ನೇ ವಯಸ್ಸಿನಲ್ಲೇ ತೋಫಖಾನೆಯವರಿಗೆ ಬರೆವಣಿಗೆ ಕರಗತವಾಗಿತ್ತು. ಆಗಲೇ ಅವರು ಪುಸ್ತಕ ಬರೆದಿಟ್ಟಿದ್ದರು ಎಂಬ ಸಂಗತಿ ಗೊತ್ತಾಗಿ ಆಶ್ಚರ್ಯಪಟ್ಟೆ. ಆದರೆ ಅವರೇಕೆ ಬರವಣಿಗೆ ಮುಂದುವರಿಸಲಿಲ್ಲ ಎನ್ನುವುದು ಗೊತ್ತಾಗಲಿಲ್ಲ. ಪ್ರಕಾಶಕರು ಸಿಗಲಿಲ್ಲವೋ, ಪ್ರೋತ್ಸಾಹ ಸಿಗಲಿಲ್ಲವೋ, ಸಂಕೋಚವೋ ತಿಳಿಯದು. ಅವರು ವೃತ್ತಿಪರ ಸಾಹಿತಿ ಆಗಲೇ ಇಲ್ಲ. ಬರವಣಿಗೆ ಮುಂದುವರಿಸಿದ್ದರೆ ದಿಗ್ಗಜರಾಗುತ್ತಿದ್ದರು. ಆದರೂ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣ ಪ್ರಕಟವಾಗಿ ವೇದಿಕೆ ಸಿಕ್ಕಿತು. ಪಾ.ವೆಂ. ಆಚಾರ್ಯರು ಅವರಿಗೆ ಹಾಗೂ ತಮಗೆ ಅವಕಾಶ ಕೊಟ್ಟರು. ಅವರೊಬ್ಬ ಆದರ್ಶ ಪತ್ರಕರ್ತ, ಅವರಂಥ ಪತ್ರಕರ್ತರನ್ನು ತಾವು ಈವರೆಗೂ ಕಂಡಿಲ್ಲ. ವೃತ್ತ ಪತ್ರಿಕೆ ಮನಸ್ಸು ಮಾಡಿದರೆ ಸಾಹಿತಿಯನ್ನು ಸೃಷ್ಟಿ ಮಾಡಲು ಸಾಧ್ಯ. ಶ್ರೀನಿವಾಸ ತೋಫಖಾನೆಯವರ ಕೈ ಬರಹದ ಕೃತಿಯನ್ನು ಸಾಹಿತ್ಯ ಪ್ರಕಾಶನ ಎಂ.ಎ. ಸುಬ್ರಹ್ಮಣ್ಯ ಹೊರ ತಂದಿರುವ ಕಾರ್ಯ ಶ್ಲಾಘನೀಯ ಎಂದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ 'ಯುಗಧರ್ಮ' ಕೃತಿ ಹಾಗೂ ತೋಫಖಾನೆ ಕುರಿತಾಗಿ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ರಘುವೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರುದಾಸ ಭಟ್, ಡಾ೤ ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ರಾಮಾಪುರ, ಸಂಯುಕ್ತ ಕರ್ನಾಟಕ ಸಂಪಾದಕ ಕೆ.ಎಸ್. ಜಗನ್ನಾಥ ವೇದಿಕೆಯಲ್ಲಿದ್ದರು. ಎಂ.ಎ. ಸುಬ್ರಹ್ಮಣ್ಯ ನಿರೂಪಿಸಿದರು. ಮಲ್ಲಿಕಾರ್ಜುನ ಸಿದ್ದಣ್ಣವರ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!