ಧಾರವಾಡ: ನವಲೂರು ಪೇರಲ, ನವಲೂರು ಮಾವು ತಿಂದವನೇ ಧನ್ಯ ಎಂಬ ಮಾತಿತ್ತು. ಅದರಲ್ಲೂ ನವಲೂರು ಕೆರೆಯ ಅಂಗಳದಲ್ಲಿ ಬೆಳೆದ ಹಣ್ಣು ಬಲುರುಚಿ.
ಈ ಹಣ್ಣುಗಳನ್ನು ಗ್ರಾಹಕ ಕೆರೆಯ ಅಂಗಳದಲ್ಲಿನ ಹಣ್ಣುಗಳೆಂದರೆ ಖುಷಿಯಿಂದ ಕೊಂಡುಕೊಳ್ಳುತ್ತಿದ್ದ. ಕಾರಣ ಅಲ್ಲಿಯ ಕೆರೆಯ ನೀರಿನ ಗುಣಧರ್ಮ ಆ ಹಣ್ಣುಗಳಿಗೆ ಆ ರುಚಿಯನ್ನು ಕೊಡುಗೆಯಾಗಿ ನೀಡುತ್ತಿತ್ತು. ಆದರೆ, ಇಂತಹ ಕೆರೆ ಇಂದು ಗಬ್ಬೆದ್ದಿದೆ. ಪಾಲಿಕೆ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಚರಂಡಿ ನೀರಿನಿಂದ ಅಪವಿತ್ರಗೊಂಡಿದೆ. ಈ ಕೆರೆಯ ಶೃಂಗಾರ ಹಾಗೂ ನೀರಿನ ಗುಣಧರ್ಮ ಹೇಗಿತ್ತೆಂದರೆ, ಕೆರೆಯ ಅಂಗಳಕ್ಕೆ ಹತ್ತಾರು ಬಗೆಯ ವಿದೇಶಿ ಬಾನಾಡಿಯ ಹಕ್ಕಿಗಳು ಪ್ರತಿವರ್ಷ ಆಗಮಿಸುತ್ತಿದ್ದವು. ಆದರೆ, ಇಂದು ವಿದೇಶಿ ಪಕ್ಷಿಗಳಿರಲಿ, ಗ್ರಾಮದಲ್ಲಿನ ದನಕರುಗಳೂ ಈ ಕೆರೆ ಸಮೀಪ ಸುಳಿಯುತ್ತಿಲ್ಲ. ಇದರಿಂದಾಗಿ ಪಕ್ಷಿಗಳ ತಜ್ಞರೂ ಈ ಕೆರೆಯು ಕಲುಷಿತಗೊಂಡಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಾಲಿಕೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಸ್ವಂತ ದುಡ್ಡನ್ನು ವಿನಿಯೋಗಿಸುವವರಂತೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕೆರೆಯ ಅಭಿವೃದ್ಧಿಗೆ ತಮ್ಮ ವಿರೋಧ ಮನಃಸ್ಥಿತಿ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆ ಈ ಕೆರೆಯು ನಗರದ ಸುಂದರ ತಾಣವಾಗಿ, ಶುದ್ಧ ಕುಡಿಯುವ ನೀರಿನ ಕೆರೆಯಾಗಿ, ಗ್ರಾಮದ ಹಲವಾರು ರೈತರಿಗೆ ಅನ್ನದಾತವಾಗಿ, ತನ್ನ ಸುತ್ತಲೂ ಪೇರಲ ಹಾಗೂ ಮಾವು ಗಿಡಗಳನ್ನು ಸೃಷ್ಟಿಸಿಕೊಂಡು ಅವುಗಳಿಗೆ ರುಚಿ ನೀಡಿ, ವಿದೇಶಿ ಬಾನಾಡಿಗಳ ಕಲರವದಿಂದ ಕಂಗೊಳಿಸುತ್ತಿತ್ತು. ಆದರೆ, ನಗರ ಪ್ರದೇಶ ಹಬ್ಬಿದಂತೆಲ್ಲ, ಈ ಕೆರೆಯೂ ತನ್ನ ಸೊಬಗನ್ನು ಕಳಚುತ್ತಾ ಬರುತ್ತಿರುವುದು ದುರಂತವೇ ಸರಿ.
ಕೆರೆಗೆ ನಗರದ ಚರಂಡಿ ನೀರು: ಕೆರೆಯ ಸುತ್ತಮುತ್ತಲಿನ ನಗರಗಳಾದ ಗಾಂಧಿನಗರ, ವಿದ್ಯಾಗಿರಿ, ಯಾಲಕ್ಕಿ ಶೆಟ್ಟರ ಕಾಲನಿ, ಕೆಎಂಎಫ್ಗಳಲ್ಲಿನ ಚರಂಡಿಯ ನೀರು ಈ ಕೆರೆಯನ್ನು ಬಂದು ಸೇರುತ್ತಿದೆ. ಈ ಹಿಂದೆಯೂ ಇಲ್ಲಿಯ ಚರಂಡಿ ನೀರು ಕೆರೆ ಸೇರುತ್ತಿತ್ತು. ಆ ಸಂದರ್ಭದಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸುಮಾರು ರು. 30 ಲಕ್ಷಗಳ ಅನುದಾನದಲ್ಲಿ ಈ ಕೆರೆಗೆ ಬಂದು ಸೇರುವ ಚರಂಡಿ ಹಾಗೂ ಗಟಾರು ನೀರನ್ನು ಬೇರೆಡೆ ಸಾಗಿಸಲು ಪರ್ಯಾಯ ವ್ಯವಸ್ಥೆ ಕೈಗೊಂಡಿದ್ದರು. ಆದರೆ, ಆ ಯೋಜನೆ ಕೇವಲ ಒಂದು ವರ್ಷ ಮಾತ್ರ ಕೆಲಸ ನಿರ್ವಹಿಸಿ, ಸದ್ಯ ಮತ್ತೆ ಕೆರೆಯಲ್ಲಿ ನಗರದ ಚರಂಡಿಯ ನೀರು ಬಂದು ಸೇರುತ್ತಿದೆ. ಇದರಿಂದಾಗಿ ಇಲ್ಲಿ ಸಂಚರಿಸುವ ಜನ ಗಬ್ಬು ವಾಸನೆಯಿಂದ ಪರಿತಪಿಸುವಂತಾಗುತ್ತಿದೆ.
ಗ್ರಾಮಕ್ಕೆ ಹೊಂದಿಕೊಂಡು ಈ ಕೆರೆ ಇರುವುದರಿಂದಾಗಿ ಇಲ್ಲಿ ಅಶುದ್ಧ ನೀರು ಬಂದು ಸೇರುತ್ತಿರುವುದರಿಂದ ಗ್ರಾಮಸ್ಥರಿಗೆ ಹಲವಾರು ರೋಗಗಳು ಕಾಣಿಸುತ್ತಿವೆ. ಕೆರೆಯ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಆ ಚಿಕ್ಕಮಕ್ಕಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ಎಂಬುದು ಗ್ರಾಮಸ್ಥರ ಅಂಬೋಣ.
ಕೆರೆಯ ಅಭಿವೃದ್ಧಿ ಕುರಿತು ಗ್ರಾಮಸ್ಥರು ಪಾಲಿಕೆ ಹಾಗೂ ಸಣ್ಣ ನೀರಾವರಿಯವರನ್ನು ಸಂಪರ್ಕಿಸಿದಾಗ, ಪಾಲಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಅದು ಕೆರೆ ಎಂದು ಸಾಗ ಹಾಕಿದರೆ, ಸಣ್ಣ ನೀರಾವರಿಯವರು ಅಲ್ಲಿ ನಗರದ ಚರಂಡಿಯ ನೀರು ಬಂದು ಸೇರುತ್ತದೆ. ಅದು ಪಾಲಿಕೆ ವ್ಯಾಪ್ತಿಗೆ ಬರುತ್ತದೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಜಲ ಕಳೆಯಿಂದ ತೊಂದರೆ...: ಪಾಲಿಕೆ ಸದಸ್ಯರು ಹಾಗೂ ಗ್ರಾಮಸ್ಥರು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದರಿಗೆ ದುಂಬಾಲು ಬಿದ್ದು ಸುಮಾರು ರು. 20 ಲಕ್ಷ ಅನುದಾನದಲ್ಲಿ ಇಲ್ಲಿಯವರೆಗೆ ಎರಡು ಬಾರಿ ಕೆರೆಯ ಹೂಳನ್ನು ಎತ್ತಿದ್ದಾರೆ. ಆದರೂ ಕೆರೆ ಮಾತ್ರ ಸದ್ಯ ಜಲ ಕಳೆ ಹಾಗೂ ಹುಳು ತಂಬಿಕೊಂಡು ನಲಗುತ್ತಿದೆ. ಈ ಕೆರೆಯ ಪಕ್ಕದಲ್ಲಿಯೇ ಇನ್ನೂ ಎರಡು ಚಿಕ್ಕ ಕೆರೆಗಳಿದ್ದೂ, ಅದರಲ್ಲಿನ ಒಂದು ಕೆರೆಯ ನೀರನ್ನು ಗ್ರಾಮಸ್ಥರು ಕುಡಿಯಲು ಬಳಸುತ್ತಿದ್ದರು. ಆದರೆ, ಆ ಕೆರೆಗಳೂ ಕಲುಷಿತಗೊಂಡಿವೆ.
ಕೆರೆಯ ಸುತ್ತಮುತ್ತ ಹೊಲ-ಗದ್ದೆಗಳಿದ್ದು, ಅಲ್ಲಿಂದ ಹರಿದು ಬರುವ ನೀರನ್ನು ಮಾತ್ರ ಕೆರೆಗೆ ಸೇರುವಂತೆ ಮಾಡಿದರೆ, ಆ ನೀರು ಶುದ್ಧವಾಗಿರುತ್ತವೆ. ಇದರಿಂದ ಪಕ್ಷಿ, ಪ್ರಾಣಿ ಸಂಕುಲಕ್ಕೆ ಒಂದು ವರದಾನವಾಗುತ್ತದೆ. ನೀರು ಶುದ್ಧವಿದ್ದರೆ ಇದನ್ನು ಪ್ರವಾಸಿಗರ ತಾಣವನ್ನಾಗಿಯೂ ಸೃಷ್ಟಿಸಬಹುದು. ಅದಕ್ಕಾಗಿ ಸರ್ಕಾರ ಮನಸ್ಸು ಮಾಡಬೇಕಿದೆ ಎಂಬುದು ಗ್ರಾಮಸ್ಥರ ಹಾಗೂ ಪಕ್ಷಿಪ್ರೇಮಿಗಳ ಕೋರಿಕೆ.
ಹೊನ್ನಪ್ಪ ಲಕ್ಕಮ್ಮನವರ