ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಅತಿಕ್ರಮಣಗೊಂಡ ಸರ್ಕಾರಿ ಕೆರೆಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಗ್ರಾಮದ ಸರ್ವೇ ನಂಬರ್ 161 ಸರ್ಕಾರಿ ಕೆರೆ ಇದ್ದು, ಹಲವು ವರ್ಷಗಳ ಹಿಂದೆಯೇ ಅತಿಕ್ರಮಣಗವಾಗಿದ್ದು, ತೆರವಿಗೆ ಆಗ್ರಹಿಸಲಾಗಿತ್ತು. ಅತಿಕ್ರಮಣ ತೆರವುಗೊಳಿಸಲು ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳು ತಹಸೀಲ್ದಾರ್ಗೆ ಪತ್ರ ಬರೆದಿದ್ದರೂ ಕಾರ್ಯಗತವಾಗಿಲ್ಲ ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.
ಲೋಕಾಯುಕ್ತ ಪ್ರವಾಸ 30ರಂದು
ಧಾರವಾಡ: ಲೋಕಾಯುಕ್ತ ಧಾರವಾಡ ಕಚೇರಿಯ ಪೊಲೀಸ್ ಅಧಿಕಾರಿಗಳು ಜೂ. 27ರಂದು ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳ ಪ್ರವಾಸವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿ ಜೂ. 30ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ನಲ್ಲಿ ಹಾಗೂ ಇದೇ ಅವಧಿಯಲ್ಲಿ ಕುಂದಗೋಳ ಪ್ರವಾಸಿ ಮಂದಿರದಲ್ಲೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ: ಪ್ರೋಬಸ್ ಕ್ಲಬ್ ಪದಗ್ರಹಣ
ಧಾರವಾಡ: ಕೆ.ಸಿ. ಪಾರ್ಕ್ ಬಳಿಯ ಪ್ರೋಬಸ್ ಕ್ಲಬ್ನ ಪ್ರಸಕ್ತ ಸಾಲಿನ ಪದಗ್ರಹಣ ಸಮಾರಂಭವನ್ನು ಪ್ರಸೂತಿ ತಜ್ಞ ಡಾ. ಎಸ್.ಎಸ್. ಹಿರೇಮಠ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ನೆರವೇರಿಸಿದರು. ಸಮಾಜದಲ್ಲಿ ಹಿರಿಯರು ಗೌರವಯುತವಾಗಿ ಬದುಕುವಂತಾಗಬೇಕು. ಮಕ್ಕಳು ಸುಸ್ಕೃಂತರಾಗಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳು ಚಿಕ್ಕವರಿದ್ದಾಗ ಬಡತನವಿದ್ದರೂ ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಬೆಳಗುತ್ತಾರೆ. ಆದರೆ, ವಿದ್ಯಾವಂತರಾದ ಮೇಲೆ ಮಕ್ಕಳು ಸರಿಯಾಗಿ ಗಮನಿಸೋದಿಲ್ಲ. ಪ್ರೋಬಸ್ ಕ್ಲಬ್ ಹಾಗೂ ರೋಟರಿ ಕ್ಲಬ್ಗಳು ಇಂಥ ನೊಂದ ಜೀವಗಳ ಸಹಾಯಕ್ಕೆ ಬರಬೇಕೆಂದು ಡಾ. ಎಸ್.ಎಸ್. ಹಿರೇಮಠ ಹೇಳಿದರು. ಕ್ಲಬ್ ನೂತನ ಅಧ್ಯಕ್ಷ ಎಫ್.ಎಸ್. ಕೋತಂಬರಿ ಮುಂದಿನ ವರ್ಷದ ಯೋಜನೆಗಳನ್ನು ತಿಳಿಸಿದರು. ಡಾ. ಲೀಲಾ ಹಿರೇಮಠ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕ್ಲಬ್ನ ಹಿಂದಿನ ಅಧ್ಯಕ್ಷ ಕೆ.ಎಂ. ಅಂಗಡಿ, ಎಸ್.ಬಿ. ತೋರಗಲ್ ಸ್ವಾಗತಿಸಿದರು. ಭಾಗ್ಯವತಿ ನಡುಕಟ್ಟಿ ಪ್ರಾರ್ಥಿಸಿದರು. ಕಾರ್ಯದರ್ಶಿ ಎಂ.ಎಲ್. ಬಿಜಾಪುರನಿರ್ವಹಿಸಿದರು. ಸುಭಾಷ ಸವಣೂರ, ಸಿ.ಎಸ್. ಅಂಗಡಿ ಇದ್ದರು.