ಧಾರವಾಡ

ಚಿನ್ನಾಭರಣ ದಾಖಲೆ ಮಾರಾಟ

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 2
ಚಿನ್ನ ಎಷ್ಟಿದ್ದರೂ ಚೆನ್ನ. ಅದರಲ್ಲಿಯೂ ಅಕ್ಷಯ ತೃತೀಯ ಚಿನ್ನ ಖರೀದಿಸುವವರಿಗೊಂದು ಸಬೂಬು. ಶುಭ ಶುಕ್ರವಾರದಂದು ಅಕ್ಷಯ ತೃತೀಯವಾಗಿದ್ದರಿಂದ ಹುಬ್ಬಳ್ಳಿಯ ಚಿನ್ನದಂಗಡಿಗಳಲ್ಲಿ ಒಡವೆ ಖರೀದಿಸುವ ಭರಾಟೆ ಜೋರಾಗಿತ್ತು.
ಕಳೆದ ವರ್ಷ ಹುಬ್ಬಳ್ಳಿ ಚಿನ್ನದಂಗಡಿಗಳಲ್ಲಿ ರು. 98 ಕೋಟಿ ಬೆಲೆ ಬಾಳುವ ಒಡವೆ ಖರೀದಿಯಾಗಿದ್ದರೆ, ಈ ಬಾರಿ ಸರಿಸುಮಾರು ರು. 125 ಕೋಟಿಗೂ ಮಿಕ್ಕಿ ಚಿನ್ನಾಭರಣ ಖರೀದಿಯಾಗಿರುವ ಬಗ್ಗೆ ವರದಿಯಾಗಿದೆ. ಹುಬ್ಬಳ್ಳಿಯಲ್ಲಿ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಮಲಬಾರ್ ಗೋಲ್ಡ್, ಚೆಮ್ಮನೂರ ಜ್ಯುವೆಲರ್ಸ್, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್, ಸ್ವರ್ಣಾ ಜ್ಯುವೆಲರ್ಸ್, ತನಿಷ್ಕಾ, ಜೋಯಾಲುಕಾಸ್, ಶುಭಂನಂತಹ ಪ್ರತಿಷ್ಠಿತ ಚಿನ್ನದ ಮಳಿಗೆಯಲ್ಲಿ ಚಿನ್ನ ಖರೀದಿಗೆ ಶುಕ್ರವಾರ ಬೆಳಗ್ಗೆಯಿಂದಲೇ ಜನ ಜಂಗುಳಿ ಸೇರಿತ್ತು. ಇನ್ನು ಸಣ್ಣ ಪುಟ್ಟ ಬಂಗಾರದ ಅಂಗಡಿಗಳಲ್ಲಿಯೂ ಆಭರಣ ಖರೀದಿ ಜೋರಾಗಿಯೇ ನಡೆದಿತ್ತು.
ಅಕ್ಕಪಕ್ಕ ಜಿಲ್ಲೆಯ ಗ್ರಾಹಕರು: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಚಿನ್ನದ ಒಡವೆ ಖರೀದಿಗೆ ಅಕ್ಕಪಕ್ಕದ ಜಿಲ್ಲೆಯಿಂದ ಜನ ಬರುತ್ತಾರೆ. ವಿಶೇಷವಾಗಿ ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಜನ ಬಂಗಾರ ಖರೀದಿಗೆ ಬರುತ್ತಾರೆ. ಹುಬ್ಬಳ್ಳಿಯಲ್ಲಿ ನೂರಾರು ಬಂಗಾರದಂಗಡಿಗಳಿರುವ ಜತೆಗೆ ನಾನಾ ಬಗೆಯ ಡಿಸೈನ್ ಒಡವೆಗಳು ಲಭ್ಯ. ಹೀಗಾಗಿ ತಮಗಿಷ್ಟವಾದ ಚಿನ್ನಾಭರಣ ಖರೀದಿಸಲು ಜನ ಹುಬ್ಬಳ್ಳಿಗೆ ಬರುವುದು ವಾಡಿಕೆ.
ಇನ್ನೂ ಇದೀಗ ಮದುವೆಯ ಕಾಲ ಹೀಗಾಗಿ, ಅಕ್ಷಯ ತೃತೀಯ ಹೆಸರಲ್ಲಿ ಮದುವೆಗೆ ಬೇಕಾಗುವ ಒಡವೆಗಳನ್ನೂ ಜನ ಖರೀದಿಸಿದರು. ಅದರಲ್ಲಿಯೂ ರು. 33 ಸಾವಿರದ ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ ಇದೀಗ ರು. 30 ಸಾವಿರದ ಹತ್ತಿರ ಓಡಾಡುತ್ತಿದೆ. ಮದುವೆಯ ಕಾಲಕ್ಕೆ ಮತ್ತೆ ಚಿನ್ನದ ಬೆಲೆ ಹೆಚ್ಚಾದರೆ ಎನ್ನುವ ಮುಂದಾಲೋಚನೆಯಿಂದ ಈ ದಿನದಂದೇ ಜನ ಚಿನ್ನಾಭರಣ ಖರೀದಿಗೆ ಆಸಕ್ತಿ ತೋರಿದರು. ಅದರಲ್ಲಿಯೂ ಅಕ್ಷಯ ತೃತೀಯದಂಗವಾಗಿ ವಿವಿಧ ಚಿನ್ನಾಭರಣ ಅಂಗಡಿಗಳು ವಿಶೇಷ ಕೊಡುಗೆ ಘೋಷಣೆ ಮಾಡಿದ್ದರಿಂದ ಜನ ಖುಷಿ ಖುಷಿಯಿಂದ ಆಭರಣ ಖರೀದಿಸುತ್ತಿರುವುದು ಕಂಡು ಬಂದಿತು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸಂಜೆ ಜೋರಾಗಿ ಮಳೆಯಾಗಿದ್ದರ ಪರಿಣಾಮ ಒಂದಿಷ್ಟು ಜನ ಬಂಗಾರದಂಗಡಿಗಳಿಗೆ ಹೋಗಲು ಹಿಂದೇಟು ಹಾಕಿದರು. ಆದಾಗ್ಯೂ ಬಹುಪಾಲು ಮಂದಿ ಹಬ್ಬದ ಸಂಪ್ರದಾಯವೆನ್ನುವಂತೆ ಮಳೆಯನ್ನೂ ಲೆಕ್ಕಿಸದೇ ಬಂಗಾರದಂಗಡಿಗಳಿಗೆ ಲಗ್ಗೆ ಇಟ್ಟರು. ಕಾರ್ಮಿಕರ ದಿನಾಚರಣೆಯಂಗವಾಗಿ ಮೇ 1ರಂದು ರಜೆಯಿದ್ದರಿಂದ ಕೆಲವರು ಹಿಂದಿನ ದಿನವೇ ಬಂಗಾರದೊಡವೆ ಖರೀದಿಸಿಟ್ಟುಕೊಂಡು ಪೂಜೆ ಮಾಡಿ ತೊಟ್ಟು ಸಂತಸ ಪಟ್ಟರು. ಬೆಲೆ ಏರಿಕೆ, ಬರ ಇತ್ಯಾದಿ ಸಮಸ್ಯೆಗಳ ಮಧ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದಾಗ ಅಕ್ಷಯ ತೃತೀಯದಂಗವಾಗಿ ಆಭರಣ ಖರೀದಿ ಈ ಸಲ ಜೋರಾಗಿಯೇ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!