ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 9
ಬೆಂಕಿ ಹತ್ತಿದಾಗಲಷ್ಟೇ ಬಾವಿ ತೋಡುವ ಕೆಲಸ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯದ್ದು !
ಕಳೆದ ವಾರ ಬಿರುಗಾಳಿ ಮಿಶ್ರಿತ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ತೀವ್ರ ತೊಂದರೆಗೀಡಾಗಿದ್ದ ಅವಳಿ ನಗರದ ನಾಗರಿಕರು ಇದೀಗ ಮತ್ತೆ ಅಂಥದ್ದೇ ಆತಂಕ ಎದುರಿಸುತ್ತಿದ್ದಾರೆ.
ಗಟಾರುಗಳಲ್ಲಿ ತುಂಬಿದ ಹೂಳಿನಿಂದಾಗಿ ಮಳೆ ನೀರು ಸರಾಗವಾಗಿ ಹರಿಯದೇ ಚರಂಡಿ ನೀರಿನೊಂದಿಗೆ ಮಿಶ್ರಣಗೊಂಡು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿತ್ತು. ಇದರೊಂದಿಗೆ ನಾಲಾಗಳಲ್ಲಿನ ಕೊಳಚೆ ನೀರೂ ಸೇರಿಕೊಂಡು ನಾಗರಿಕರು ತೊಂದರೆಗೀಡಾಗಿದ್ದರು.
ಈ ಸಂದರ್ಭದಲ್ಲಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದ ಮೇಯರ್ ಶಿವು ಹಿರೇಮಠ ಹಾಗೂ ಮತ್ತಿತರ ಅಧಿಕಾರಿಗಳು ಗಟಾರು ಹಾಗೂ ನಾಲಾಗಳ ಸ್ವಚ್ಛತಾ ಕಾರ್ಯವನ್ನು ತುರ್ತಾಗಿ ಕೈಗೊಳ್ಳುವಂತೆ ಆದೇಶ ನೀಡಿದ್ದರಾದರೂ ಆದೇಶ ಸಮರ್ಪಕವಾಗಿ ಪಾಲನೆ ಆಗಲೇ ಇಲ್ಲ.
ಕೇತೇಶ್ವರನಗರದಲ್ಲಿನ ನಾಲಾ ಹೂಳೆತ್ತಲು ಹಿಟಾಚಿ ಬಳಸುವಂತೆ ಮೇಯರ್ ಶಿವು ಹಿರೇಮಠ ಸೂಚಿಸಿದ್ದರೂ ಈ ಸೂಚನೆ ಇದುವರೆಗೂ ಜಾರಿಗೆ ಬಂದಿಲ್ಲ. ಹಳೇ ಹುಬ್ಬಳ್ಳಿ ಮೂಲಕ ಹಾಯ್ದು ಹೋಗುವ ನಾಲಾದಲ್ಲಿ ಹೂಳು ತುಂಬಿದ್ದು, ಕಳೆದ ಅನೇಕ ವರ್ಷಗಳಿಂದ ಹೂಳು ತೆಗೆದಿಲ್ಲ. ಪ್ರತಿ ಮಳೆಗಾಲದಲ್ಲಿ ನಾಲಾದಲ್ಲಿನ ಹೂಳು ತೆಗೆಯುವ ಕುರಿತು ಮಾತನಾಡುವ ಪಾಲಿಕೆ ಸದಸ್ಯರು, ಅಧಿಕಾರಿಗಳು, ಮಳೆಗಾಲದ ನಂತರ ನಾಲಾ ಹೂಳು ಮರೆತುಬಿಡುತ್ತಾರೆ.
ಇದರೊಂದಿಗೆ ಕೇತೇಶ್ವರನಗರದಲ್ಲಿನ ನಾಲಾ ಪ್ರದೇಶವನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿದ್ದು, ನಾಲಾ ವ್ಯಾಪ್ತಿ ಕಡಿಮೆಯಾಗಿದೆ. ಇದು ಸಹ ನಾಲಾದಲ್ಲಿನ ಮಳೆ ಹಾಗೂ ಚರಂಡಿ ನೀರು ರಸ್ತೆಗೆ ಆಗಮಿಸಲು ಪ್ರಮುಖ ಕಾರಣ. ಇನ್ನೂ ಕಮರಿಪೇಟ, ಎಸ್.ಎಂ. ಕೃಷ್ಣ ನಗರ, ಗಿರಣಚಾಳ, ಚೆನ್ನಪೇಟ, ಕಸಬಾಪೇಟ ಸೇರಿದಂತೆ ಪ್ರಮುಖ ಪ್ರದೇಶದಲ್ಲಿನ ಗಟಾರುಗಳಲ್ಲಿಯೂ ಹೂಳು ತುಂಬಿದೆ.
ಕೆಲವೆಡೆ ಗಟಾರುಗಳಲ್ಲಿ ಕಲ್ಲುಗಳನ್ನಿಟ್ಟಿದ್ದು, ಮಳೆ ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿದೆ. ನಾಲ್ಕೈದು ದಿನಗಳಿಂದ ತಟಸ್ಥಗೊಂಡಿದ್ದ ಮಳೆ ಇದೀಗ ಮತ್ತೆ ಸುರಿಯಲಾರಂಭಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಪ್ರಾರಂಭಗೊಂಡಿದೆ.
ಈ ಮಧ್ಯೆ ಕೇತೇಶ್ವರ ನಗರಕ್ಕೆ ಭೇಟಿ ನೀಡಿದ್ದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ನಾಲಾದಲ್ಲಿನ ಹೂಳು ತೆಗೆಯುವ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದನ್ನು ಗಮನಿಸಿ ಆರೋಗ್ಯ ನಿರೀಕ್ಷಕರೊಬ್ಬರಿಗೆ ಅಮಾನತುಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ಗಟಾರು ಸ್ವಚ್ಛಗೊಳಿಸುವ ಹಾಗೂ ನಾಲಾದಲ್ಲಿನ ಹೂಳು ತೆಗೆಯುವ ಕಾಮಗಾರಿ ಮಾತ್ರ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಕೆಲ ಪ್ರದೇಶಗಳಲ್ಲಿ ಗಟಾರುಗಳನ್ನೂ ಅತಿಕ್ರಮಿಸಿಕೊಂಡಿರುವ ದೃಶ್ಯಗಳು ಕಾಣುತ್ತಿದ್ದು, ತೆರವುಗೊಳಿಸುವ ಕಾರ್ಯವಾಗಬೇಕಿದೆ.
ಗಟಾರು, ನಾಲಾ ಸ್ವಚ್ಛಗೊಳಿಸುವುದು ಸೇರಿದಂತೆ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂಥಕೆಲಸ ಸಾಮಾನ್ಯವಾಗಿ ಮಳೆಗಾಲಕ್ಕಿಂತ ಸುಮಾರು ಒಂದು ತಿಂಗಳು ಮುಂಚೆಯಾದರೂ ಪ್ರಾರಂಭಗೊಳ್ಳಬೇಕು.
ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೇ ಎಚ್ಚೆತ್ತುಕೊಳ್ಳುವ ಮಹಾನಗರ ಪಾಲಿಕೆಯ ನಿರ್ಲಕ್ಷತನಕ್ಕೆ ಅವಳಿ ನಗರದ ನಾಗರಿಕರು ಬೆಲೆ ತೆತ್ತಬೇಕಿದೆ.
ಅವಳಿ ನಗರದಲ್ಲಿ ಗಟಾರು ಹಾಗೂ ನಾಲಾ ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಗೊಂಡಿದೆ. ವಿವಿಧ ಪ್ರದೇಶಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ್ದು, ನಿರೀಕ್ಷೆಯಂತೆ ಕಾಮಗಾರಿ ನಡೆಯುತ್ತಿದೆ. ನಾಲಾ ಸ್ವಚ್ಛಗೊಳಿಸಲು ಹಿಟಾಚಿಗಳು ಲಭಿಸಿಲ್ಲ. ಹೀಗಾಗಿ ಜೆಸಿಬಿ ಯಂತ್ರಗಳನ್ನು ನಾಲಾದಲ್ಲಿನ ಹೂಳೆತ್ತಲು ಬಳಸಿಕೊಳ್ಳಲಾಗುತ್ತಿದೆ.
-ಶಿವು ಹಿರೇಮಠ, ಮೇಯರ್
-ಆನಂದ ಅಂಗಡಿ