ಧಾರವಾಡ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿ, ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದರೆ, ನಾನು ದೇಶ ಬಿಟ್ಟು ತೊಲಗುವುದಾಗಿ ಹೇಳಿಕೆ ನೀಡಿದ್ದ ಸಾಹಿತಿ ಯು.ಆರ್. ಅನಂತಮೂರ್ತಿ ಅವರಿಗಾಗಿ ವಿಮಾನದ ಟಿಕೆಟ್ ಕಾಯ್ದಿರಿಸಲಾಗಿದ್ದು, ಮೇ 26ರಂದು ವಿಮಾನ ಕರಾಚಿಗೆ ಹೊರಡಲಿದೆ ಎಂದು ಭಾರತ ಕ್ರಾಂತಿ ಸೇನೆ ಮುಖ್ಯಸ್ಥ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಯು.ಆರ್. ಅನಂತಮೂರ್ತಿ ವಿಚಾರವಂತರಾಗಿದ್ದು, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಅಂತಹ ಬುದ್ಧಿವಂತರು ಹೀಗೆ ಅಜ್ಞಾನದಿಂದ ಮಾತನಾಡುವುದು ಸರಿಯಲ್ಲ. ಅವರೇ ಹೇಳಿದಂತೆ ದೇಶಬಿಟ್ಟು ಹೋಗಲು ಭಾರತ ಕ್ರಾಂತಿ ಸೇನೆಯಿಂದ ರು. 1.50 ಲಕ್ಷ ಹಣ ಸಂಗ್ರಹಿಸಲಾಗಿದ್ದು, ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ಮತ್ತು ದೆಹಲಿಯಿಂದ ಕರಾಚಿಗೆ ವಿಮಾನದ ಟಿಕೆಟ್ ಕಾಯ್ದಿರಿಸಲಾಗಿದೆ. ಅವರೊಂದಿಗೆ ಗೌರಿ ಲಂಕೇಶ್ ಹಾಗೂ ಗಿರೀಶ ಕಾರ್ನಾಡ್ ಹೋದರೂ ಸಂತೋಷ. ಇಲ್ಲವಾದರೆ ಅವರೆಲ್ಲ ಸಾರ್ವಜನಿಕರ ಎದುರು ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು. ವಿವೇಕಾನಂದ ಪಾಲನಕರ ಪತ್ರಿಕಾಗೋಷ್ಠಿಯಲ್ಲಿದ್ದರು.