ಹುಬ್ಬಳ್ಳಿ: ರೈತರ ನಂತರ ಎರಡನೇ ಸ್ಥಾನದಲ್ಲಿರುವ ಕೈಮಗ್ಗ ನೇಕಾರರನ್ನು ಸರ್ಕಾರ 2013-14ನೇ ಬಜೆಟ್ನಲ್ಲಿ ಕಡೆಗಣಿಸಿದೆ ಎಂದು ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೈಮಗ್ಗ ಅಭಿವೃದ್ಧಿ ನಿಗಮ ನೂರಾರು ಕೋಟಿಗಳ ನಷ್ಟ ಅನುಭವಿಸುತ್ತಿದ್ದು, ಈ ಸಂಸ್ಥೆಯ ಉಳಿವಿಗೆ ಮತ್ತು ಅದರ ನೌಕರರಿಗೆ ಬಜೆಟ್ನಲ್ಲಿ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಉತ್ತರ ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಕೈಮಗ್ಗವನ್ನು ಅವಲಂಬಿಸಿದ್ದಾರೆ. ಸರ್ಕಾರ ಕೈಮಗ್ಗ ಅಭಿವೃದ್ಧಿ ನಿಗಮವನ್ನು ನಿರ್ಲಕ್ಷಿಸುತ್ತಿರುವ ಕಾರಣ ನೇಕಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆರೋಪಿಸಿದ್ದಾರೆ.