ರೋಣ: ತಾಲೂಕಿನ ಸುಕ್ಷೇತ್ರ ಇಟಗಿ ಗ್ರಾಮದ ಭೀಮಾಂಬಿಕಾದೇವಿ ದಾಸೋಹ ಭವನ ನಿರ್ಮಾಣ ಶಂಕುಸ್ಥಾಪನೆಗೆ ಸೋಮವಾರ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ, ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಘೋಷಣೆ ಕೂಗುತ್ತಾ ಮುಂದಾದ ತಾಲೂಕು ಕರವೇ (ನಾರಾಯಣಗೌಡ್ರ ಬಣ) ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿ, ಕೆಲ ಸಮಯದ ಬಳಿಕ ಬಿಡುಗಡೆ ಮಾಡಿದರು.
ಸಿಎಂ ಬರುವ ಮೊದಲು ಗ್ರಾಮದಲ್ಲಿ ಠಿಕಾಣಿ ಹಾಕಿದ ಕರವೇ ಕಾರ್ಯಕರ್ತರು ಎಂಇಎಸ್ ಸಂಘಟನೆ ಮತ್ತು ಶಿವಸೇನೆ ಸಂಘಟನೆಯ ಪುಂಡಾಟಿಕೆ ಮತ್ತು ಕನ್ನಡಿಗರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದನ್ನು ಖಂಡಿಸಿ ಘೋಷಣೆ ಕೂಗುತ್ತಿದ್ದರು. ಆಗ ಗದಗ ಡಿಎಸ್ಆರ್ಬಿಡಿ ಎಸ್ಪಿ ಶ್ರೀಕಾಂತ ಕಟ್ಟಿಮನಿ ಅವರು, ಸಿಎಂ ಅವರು ಬಂದ ಬಳಿಕ ಸರದಿ ಸಾಲಲ್ಲಿ ನಿಂತು ಮನವಿ ಸಲ್ಲಿಸಲು ನಿಮಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಸಿಎಂ ಅವರು ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಶಾಂತವಾಗಿರಿ ಎಂದು ಭಿನ್ನಹಿಸಿಕೊಂಡರು. ಆಗ ಕರವೇ ಕಾರ್ಯಕರ್ತರು ನಾವು ಸಾಮಾನ್ಯ ಜನರಂತೆ ಸರದಿ ಸಾಲಲ್ಲಿ ನಿಂತು ಮನವಿ ಕೊಡುವುದಿಲ್ಲ. ವೇದಿಕೆಗೆ ಹೋಗುವ ದಾರಿಯಲ್ಲಿ ನಿಂತು ಮನವಿ ಸಲ್ಲಿಸುತ್ತೇವೆ. ದಯವಿಟ್ಟು ಅವಕಾಶ ಕಲ್ಪಿಸಿ ಎಂದು ಪಟ್ಟು ಹಿಡಿದರು.
ಇದಕ್ಕೆ ಒಪ್ಪದ ಪೊಲೀಸರು, ಇದರಿಂದ ಸಿಎಂ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದೆ ಎಂದು ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಸೇರಿದಂತೆ ಅನೇಕರನ್ನು ಬಂಧಿಸಿ ಗಜೇಂದ್ರಗಡಕ್ಕೆ ಕರೆದೊಯ್ದರು. ಬಳಿಕ ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.
ಬಿಡುಗಡೆ: ಬಂಧಿಸಿದ ಕರವೇ ಕಾರ್ಯಕರ್ತರು ಪೊಲೀಸರು ಇಟಗಿ ಕಾರ್ಯಕ್ರಮ ಮುಗಿಯುವವರೆಗೂ ಗಜೇಂದ್ರಗಡದಲ್ಲಿ ತಡೆಹಿಡಿದು ಬಳಿಕ ಬಿಡುಗಡೆ ಮಾಡಿದರು. ಬಿಡುಗಡೆಗೊಂಡ ಕಾರ್ಯಕರ್ತರು ಮಧ್ಯಾಹ್ನ ಊಟಕ್ಕೆಂದು ಪಟ್ಟಣದ ಶಾಸಕ ಜಿ.ಎಸ್. ಪಾಟೀಲ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯನವರು ತೆರಳಿದ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ತೆರಳಿ ಮನವಿ ಸಲ್ಲಿಸಿದರು.