ರೋಣ: ರೋಣ ಮತ್ತು ನವಲಗುಂದ ತಾಲೂಕಿನ ಕೆಲ ಭಾಗಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಎದೆಗುಂದುವುದು ಬೇಡ, ಸರ್ಕಾರ ನಿಮ್ಮ ಪರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ತಾಲೂಕಿನ ಸುಕ್ಷೇತ್ರ ಇಟಗಿ ಭೀಮಾಂಬಿಕಾದೇವಿ ದಾಸೋಹ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಭಾಗದಲ್ಲಿ ಮೇನಲ್ಲಿ ಮಾತ್ರ ಮಳೆಯಾಗಿದ್ದು, ಜೂನ್ ಮತ್ತು ಜುಲೈನಲ್ಲಿ ಮಳೆಯಾಗಿಲ್ಲ. ಆಗಸ್ಟ್ನಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಅನೇಕ ಕಡೆ ಮುಂಗಾರು ಮಳೆ ಕೈಕೊಟ್ಟಿದೆ. ಅದರಂತೆಯೇ ಈ ಭಾಗದಲ್ಲಿಯೂ ಬಿತ್ತಿದ ಬೀಜಗಳು ಒಣಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಸ್ಥಳೀಯ ಶಾಸಕರಾದ ಜಿ.ಎಸ್. ಪಾಟೀಲ ಅವರು ತಿಳಿಸಿದ್ದಾರೆ. ಅದರಂತೆಯೇ ನಾನು ಸಹ ಇಲ್ಲಿಗೆ ಬರುವಾಗ ದಾರಿಯುದ್ದಕ್ಕೂ ಬೆಳೆಗಳನ್ನು ನೋಡುತ್ತಾ ಬಂದಿದ್ದು, ಇಳುವರಿ ಕುಂಠಿತವಾಗಿದ್ದು ಕಂಡು ಬಂದಿದೆ ಎಂದರು.
ಭೀಮಾಂಬಿಕಾದೇವಿ ಟ್ರಸ್ಟ್ ಕಮಿಟಿ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯವನ್ನು ಧರ್ಮರ ಮಠದ ಷಣ್ಮುಕಪ್ಪಜ್ಜ ಧರ್ಮರ ವಹಿಸಿದ್ದರು. ಶಾಸಕ ಜಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಎಚ್.ಎಸ್. ಮಹದೇವ ಪ್ರಸಾದ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ವೀರಣ್ಣ ಮತ್ತಿಕಟ್ಟಿ, ಶಾಸಕರಾದ ಬಿ.ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಎಸ್.ಎನ್. ಪ್ರಸನ್ನಕುಮಾರ, ಕೆಎಂಎಫ್ ಅಧ್ಯಕ್ಷ ನೀಲಕಂಠ ಅಸೂಟಿ, ರವಿ ದಂಡಿನ, ರಾಘವೇಂದ್ರ ಹಿಟ್ನಾಳ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ಪ್ರಭು ಮೇಟಿ, ವಿ.ಆರ್. ಗುಡಿಸಾಗರ ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿ, ವಂದಿಸಿದರು.
ದಾಸೋಹ ಭವನಕ್ಕೆ ಅನುದಾನ
ಇಟಗಿ ಭೀಮಾಂಬಿಕಾದೇವಿ ದರ್ಶನಕ್ಕೆ ಬರುವ ಭಕ್ತರಿಗಾಗಿ ದಾಸೋಹ ಭವನ ನಿರ್ಮಿಸಲು ಸರ್ಕಾರ ರು. 1 ಕೋಟಿ ಬಿಡುಗಡೆ ಮಾಡಿದೆ. ಈಗ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿದ್ದಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುವುದು. ಜನಪರವಾದ ಬೇಡಿಕೆ ಇಟ್ಟಲ್ಲಿ, ಬೇಡಿಕೆ ಈಡೇರಿಸುವ ಶಕ್ತಿ ಭೀಮಾಂಬಿಕಾದೇವಿಯಲ್ಲಿದೆ ಎಂಬ ಪ್ರತೀತಿಯಿದೆಯಂತೆ, ಅದರಂತೆ ನಾನು ಕೂಡ ದೇವಿಯಲ್ಲಿ ನಾಡಿಗೆ ಸಮರ್ಪಕವಾದ ಮಳೆಯಾಗಿ ಉತ್ತಮ ಬೆಳೆ ಬರುವಂತೆ ಎಂದು ಬೇಡಿಕೊಂಡಿದ್ದೇನೆ ಎಂದರು.