ಕನ್ನಡಪ್ರಭ ವಾರ್ತೆ, ಗದಗ, ಆ. 4
ಬಸಣ್ಣನವರ ಸಮಾನತೆಯ ಕನಸು ನನಸು ಮಾಡಲು ನಾವೆಲ್ಲಾ ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಮಹಾತಪಸ್ವಿ ಹಿರಿಯ ಅನ್ನದಾನ ಮಹಾಶಿವಯೋಗಿಗಳವರ ಪುಣ್ಯಾರಾಧನೆಯ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಾವಯವ ಕೃಷಿ ಗೋಷ್ಠಿ ಮತ್ತು ಅಭಿನವ ಅನ್ನದಾನ ಶ್ರೀಗಳಿಗೆ ರಕ್ತದ ತುಲಾಭಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಷ್ಟೊಂದು ವರ್ಷಗಳ ಹಿಂದೆಯೇ ಶರಣರು ಸಮಾನತೆಯ ಬಗ್ಗೆ ಹೇಳಿದ್ದಾರೆ. ಬದುಕಿ ತೋರಿಸಿದ್ದಾರೆ. ಆದರೆ, ಅಂದಿನಿಂದ ಇಂದಿನವರೆಗೂ ನಾವೆಲ್ಲಾ ಸಮಾನತೆಯ ಬಗ್ಗೆ ಮಾತುಗಳನ್ನು ಮಾತ್ರ ಕೇಳುತ್ತವೆ. ಅದು ಆಚರಣೆಗೆ ಬಂದಿಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹಾಗಾಗಿ ನಾವು ಯಾವುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ಹುಟ್ಟು ಮತ್ತು ಸಾವಿನ ನಡುವೆ ನಾವು ಬದುಕಿರುವ ಅವಧಿಯಲ್ಲಿ ಯಾವ ರೀತಿಯಲ್ಲಿ ಬದುಕುತ್ತೇವೆ. ಜಾತ್ಯತೀತವಾಗಿ ಬದುಕುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸಮಾಜದಲ್ಲಿ ಇಂದು ಬೇರೂರಿರುವ ಕೆಟ್ಟು ವ್ಯವಸ್ಥೆ ಎಂದರೆ ಅದು ಜಾತಿ ವ್ಯವಸ್ಥೆ. ಇದಕ್ಕೆ ಕಡಿವಾಣ ಬೀಳದೇ ಇದ್ದಲ್ಲಿ ಸಮಾಜಕ್ಕೆ ಒಳಿತಾಗುವುದಿಲ್ಲ. ಅಪಘಾತದ ಸಂದರ್ಭದಲ್ಲಿ ರಕ್ತ ಬೇಕಾದಾಗ, ಅವನು ಯಾವ ಸಮುದಾಯವನು ಎನ್ನುವುದನ್ನು ನೋಡುವುದಿಲ್ಲ. ಆಗ ಜೀವ ಉಳಿಯುವುದು ಬೇಕಾಗಿರುತ್ತದೆ. ತೊಂದರೆ ಇಂದು ಮುಕ್ತವಾದ ನಂತರ ಮತ್ತೆ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವ ಕೀಳು ಸಂಪ್ರದಾಯ ಹೋಗಬೇಕಿದೆ ಎಂದ ಸಿಎಂ ಕಾರ್ಯಕ್ರಮದಲ್ಲಿ ಬಸಣ್ಣನವರ ವಚನ ಹೇಳುವ ಮೂಲಕ ಗಮನ ಸೆಳೆದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಹಾಲಕೆರೆ ಮಠವು ಸರ್ಕಾರ ಮಾಡುವಂತಾ ಕೆಲಸವನ್ನು ಕೃಷಿ ಕ್ಷೇತ್ರದಲ್ಲಿ ಮಾಡುತ್ತಿರುವುದು ಶ್ಲಾಘನೀಯ, ಹಿಂದಿನ ಸರ್ಕಾರ ಸಾವಯವ ಕೃಷಿಗೆ ಒತ್ತು ನೀಡುವುದಾಗಿ ಕೇವಲ ಹೇಳಿಕೆ ನೀಡಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ರಾಜ್ಯದ ಪ್ರತಿ ಹೋಬಳಿಯ 100 ಎಕೆರೆ ಭೂಮಿಯಲ್ಲಿ ಕಡ್ಡಾಯವಾಗಿ ಸಾವಯವ ಕೃಷಿಗೆ ಅಳವಡಿಸಿ ರು. 40 ಕೋಟಿ ಖರ್ಚು ಮಾಡಿದೆ ಎಂದರು.
ಸಹಕಾರಿ ಸಚಿವ ಎಚ್. ಮಹದೇವ ಪ್ರಸಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಡಿಮಠದ ಶಿವಾನಂದ ರಾಜಯೋಗೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ, ರಾಮಕೃಷ್ಣ ದೊಡ್ಡಮನಿ, ಬಿ.ಆರ್. ಯಾವಗಲ್ಲ, ವಿಪ ಸದಸ್ಯ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವಾರು ನಾಯಕರು, ನಾಡಿನ ಹಾಗೂ ಪಕ್ಕದ ರಾಜ್ಯಗಳ ವಿವಿಧ ಮಠಗಳ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದ ವೆಂಕಟೇಶ ಕುಮಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಿದ್ದರಾಮ ದೇವರು ನಿರೂಪಿಸಿದರು.