ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 5
ಹುಳು ಮಿಶ್ರಣವಿರುವ ಕಳಪೆ ಗುಣಮಟ್ಟದ ಅಹಾರವನ್ನು ಮುಂಡರಗಿ ಆಹಾರ ಘಟಕದಿಂದ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿರುವ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಹೇಳುತ್ತಾ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸದಸ್ಯರ ಮಾತಿಗೆ ಬೆಲೆ ಕೊಡದ ಮಕ್ಕಳ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗೆ ಸರ್ವ ಸದಸ್ಯರು ಸಭೆಯಲ್ಲಿ ಛೀಮಾರಿ ಹಾಕಿ ಸಭೆಯಿಂದ ಹೊರ ಹಾಕಿದ ಘಟನೆ ನಡೆಯಿತು.
ಸೋಮವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ಸರಸ್ವತಿ ಹೊನ್ನೇಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು ಆಹಾರ ಪೂರೈಕೆ ಘಟಕದ ಮೇಲ್ವಿಚಾರಕ ವಿಶ್ವನಾಥರನ್ನು ಸಭೆಗೆ ಕರೆಸಿ ಎಂದು ಪ್ರತಿ ಸಭೆಯಲ್ಲಿಯೂ ಹೇಳಿದರೂ ಅಧಿಕಾರಿ ಇದಕ್ಕೆ ಸ್ಪಂದಿಸದೇ ಬೇಜವಾಬ್ದಾರಿ ತೋರಿದ್ದಾರೆ. ನಿಮ್ಮಿಂದಲೇ ಅವರ ರಕ್ಷಣೆ ನಡೆದಿದೆ ಎಂದು ಸದಸ್ಯ ಚನ್ನಪ್ಪ ಜಗಲಿ ಗಂಭೀರ ಆರೋಪ ಮಾಡಿದರು.
ಸರ್ಕಾರ ಮಕ್ಕಳ ಆರೋಗ್ಯ ಕಾಪಾಡಲು ಹಾಗೂ ಅಪೌಷ್ಟಿಕತೆ ನೀಗಿಸಲು ನಾನಾ ಯೋಜನೆಗಳನ್ನು ಜಾರಿ ಮಾಡಿದೆ. ಅದರ ಮೇಲೆ ಅಧಿಕಾರಿಗಳ ಸರಿಯಾದ ನಿಗಾ ಇಲ್ಲದೆ ಅಡ್ಡ ಹಾದಿ ಹಿಡಿದಿವೆ. ಇವತ್ತಿನಿಂದ ಆಹಾರ ಪೂರೈಕೆ ಮಾಡಿದ ಯಾವುದೇ ಬಿಲ್ಲ ಸಂದಾಯ ಮಾಡಬಾರದು ಎಂದು ಸಭೆಯಲ್ಲಿ ಠರಾವು ಪಾಸು ಮಾಡಲಾಯಿತು.
ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಬಿಟಿ ಹತ್ತಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿ ಮತ್ತು ಕೃಷಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೆ ಸರ್ಕಾರ ಸದ್ಯ ಅವರಿಗೆ ಬೆಳೆ ಹಾನಿ ಪರಿಹಾರದ ಸಹಾಯಧನದ ಹಣ ಬಿಡುಗಡೆ ಮಾಡಿದ್ದು, ನಿಜವಾದ ರೈತರಿಗೆ ತಲುಪುತ್ತಿಲ್ಲ. ರೈತರ ಹೆಸರು ಹೇಳಿ ಖೊಟ್ಟಿ ಬಿಲ್ ನೀಡಿ ಸಹಾಯಧನದ ಹಣ ಪಡೆಯುತ್ತಿದ್ದಾರೆ. ಇದರ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸದಸ್ಯ ನಿಂಬಣ್ಣ ಮಡಿವಾಳರ ಆಗ್ರಹಿಸಿದರು. ಉಳಿದಂತೆ ಸಮಾಜ ಕಲ್ಯಾಣ, ಶಿಕ್ಷಣ, ಪಿಡಬ್ಲ್ಯೂಡಿ, ಅರಣ್ಯ, ತೋಟಗಾರಿಕೆ, ಹೆಸ್ಕಾಂ ಮತ್ತಿತರ ಇಲಾಖೆಗಳ ಮೇಲೆ ಚರ್ಚೆ ನಡೆಯಿತು.
ತಾಪಂ ಅಧ್ಯಕ್ಷೆ ಶಾರದಾ ಕವಲೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಾರ್ವತೆವ್ವ ಗಾಣಗೇರ, ಸದಸ್ಯರಾದ ತಿಮ್ಮರಡ್ಡಿ ಅಳವಂಡಿ, ಸುನಂದಾ ಬಿದರಳ್ಳಿ, ಅನಸವ್ವ ಕಾಳೆ ತಾಪಂ ಇಓ ಎಂ. ನಾರಾಯಣ ಸಭೆಯಲ್ಲಿ ಇದ್ದರು.