ಕನ್ನಡಪ್ರಭ ವಾರ್ತೆ, ಗದಗ, ಆ. 5
ಕಾರ್ಮಿಕರು ಸರ್ಕಾರ ನೀಡಿರುವ ಸೌಲಭ್ಯ ಪಡೆಯಬೇಕಾದಲ್ಲಿ ನೋಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಮುರಗೋಡ ಹೇಳಿದರು.
ಅವರು ಮಂಗಳವಾರ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾವನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ-ಜಿಲ್ಲಾ ವಾಯರ್‌ಮನ್ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ತಿಂಗಳು ಜಿಲ್ಲೆಯಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ರೀತಿಯ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹೊಸಮನಿ ಪುಂಡಲಿಕ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಕೋಶಾಧ್ಯಕ್ಷ ಎಂ.ಎ. ಸಂಗನಾಳ ಅಧ್ಯಕ್ಷತೆ ವಹಿಸಿದ್ದರು. ಬಿ.ಎಚ್. ಮಾಡಲಗೇರಿ, ಸಾವಿತ್ರಿ ಕಬಾಡಿ, ಎಸ್.ಆರ್. ಗೊಂಡಬಾಳ, ಗದಗ ಜಿಲ್ಲಾ ವಾಯರ್‌ಮನ್ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಕಾಶ ಶಿದ್ಲಿಂಗ್, ಕಾರ್ಯದರ್ಶಿ ಕೋಳೂರ ಉಪಸ್ಥಿತರಿದ್ದರು.
ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಕಾರ್ಮಿಕರ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ಕುರಿತು ಉಪನ್ಯಾಸ ನೀಡಿದರು.
ಕಾರ್ಮಿಕ ನಿರೀಕ್ಷಕ ಸಿದ್ಧನಗೌಡ ಪಾಟೀಲ ಸ್ವಾಗತಿಸಿದರು. ಬಿ.ಎಂ. ಕುಕನೂರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ 100 ಕಾರ್ಮಿಕರು ಪಾಲ್ಗೊಂಡಿದ್ದರು.