ಕನ್ನಡಪ್ರಭ ವಾರ್ತೆ, ಗದಗ, ಆ. 5
ಜಿಲ್ಲೆಯಲ್ಲಿ ಮೊದಲಿನಿಂದೂ ಕೃಷಿ ಚಟುವಟಿಕೆ ಉತ್ತಮವಾಗಿ ನಡೆದುಕೊಂಡು ಬಂದಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಈ ಸಂಪ್ರದಾಯ ಮುಂದುವರಿಸಲು ಕೃಷಿ ಇಲಾಖೆ, ರೈತರು ಮತ್ತು ಕೃಷಿ ಕ್ಷೇತ್ರದಲ್ಲಿ ಗಮನೀಯ ಸೇವೆ ಸಲ್ಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ಸಂಪೂರ್ಣ ಸಹಕಾರದೊಂದಿಗೆ ಕೆಲಸ ಮಾಡಲು ಕೃಷಿ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.
ಅವರು ಗದಗ ಜಿಲ್ಲಾಡಳಿತ ಭವನದ ಜಿಪಂ ಸಭಾ ಭವನದಲ್ಲಿ ಸೋಮವಾರ ಸಂಜೆ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳೆಹಾನಿ ಪರಿಹಾರ
ಬೆಳೆ ಹಾನಿಯಾದಾಗ ರೈತರಿಗೆ ನೀಡು ಪರಿಹಾರ ವಿತರಣೆಯಲ್ಲಿ ಮದ್ಯವರ್ತಿಗಳ ಹಾವಳಿ ಕುರಿತು ಪದೇ ಪದೆ ದೂರು ಬರುತ್ತಿರುವ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಕೃಷಿ ಸಚಿವರ ಗಮನ ಸೆಳೆದರು. ಇದರ ಬಗ್ಗೆ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ರೈತರಿಗೆ ಪೂರ್ಣ ಪರಿಹಾರ ದೊರಕುವಂತೆ ಮತ್ತು ಯಾವುದೇ ಸಂದರ್ಭದಲ್ಲಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳದಿರಲು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹಾಗೂ ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲವೀರರೆಡ್ಡಿ ಅವರಿಗೆ ಕೃಷಿ ಸಚಿವರುಸೂಚಿಸಿದರು.
ರೇಷ್ಮೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಆ ಇಲಾಖೆಯಲ್ಲಿರುವ ಹೆಚ್ಚುವರಿ ನೌಕರರನ್ನು ಕೃಷಿ ಇಲಾಖೆಯಲ್ಲಿ ಸಂಯೋಜಿಸಲು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ರಾಸಾಯನಿಕ ಗೊಬ್ಬರ ದಾಸ್ತಾನಿನ ಮಾಹಿತಿ ಪಡೆದ ಸಚಿವರು ನಿಯಮಿತವಾಗಿ ಗೊಬ್ಬರ ದಾಸ್ತಾನನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲು ತಿಳಿಸಿದರು.
ಮಳೆ ಮಾಪನ ಕೇಂದ್ರ
ಮುಂದಿನ ವರ್ಷದೊಳಗೆ ಪ್ರತಿ ಗ್ರಾಪಂಗಳಲ್ಲಿ ಮಳೆ ಮಾಪನ ಕೇಂದ್ರ ನಿರ್ಮಿಸಿ ನೂತನ ಸೆಟ್‌ಲೈಟ್ ತಂತ್ರಜ್ಞಾನ ಬಳಸಿ ಮಳೆ ಮಾಪನ ತಿಳಿಯಲು ಕ್ರಮ ಜರುಗಿಸಲಾಗುತ್ತಿದೆ. ಪ್ರತಿ ಹೋಬಳಿಗೆ ಒಂದರಂತೆ ರೈತ ಸಂಪರ್ಕ ಕೇಂದ್ರ ತೆರೆಯಲಾಗಿದೆ. ಗದಗ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಖರೀದಿಸಬೇಕು. ಬರುವ 7ರಿಂದ 8 ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 700 ಜನ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಮತ್ತು ಕೇಂದ್ರಕ್ಕೆ ಒಬ್ಬರಂತೆ ಕೃಷಿ ಪದವೀಧರರನ್ನು ರೈತ ಸಂಪರ್ಕ ಕೇಂದ್ರಗಳಿಗೆ ನೇಮಿಸಲಾಗುವುದು. ಪ್ರತಿ 15 ದಿನಕ್ಕೆ ಒಮ್ಮೆಯಾದರೂ ಕೃಷಿ ವಿಜ್ಞಾನಿಗಳು ನಿಯೋಜಿಸಿದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು.
ಸಭೆಯಲ್ಲಿ ಶಾಸಕ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ವಿಪ ಸದಸ್ಯ ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ, ಉಪಾಧ್ಯಕ್ಷೆ ಸುನಿತಾ ಹಳೆಪ್ಪನ್ನವರ, ಕೃಷಿ ಇಲಾಖೆ ನಿರ್ದೇಶಕ ಡಾ. ಬಿ.ಕೆ. ಧರ್ಮರಾಜನ್, ಜಲಾನಯನ ಆಯುಕ್ತ ಶಿವಾನಂದ ಮೂರ್ತಿ, ಧಾರವಾಡ ಕೃಷಿ ವಿವಿ ಕುಲಪತಿ ಡಾ. ಕೆ.ಎಲ್. ಬಿರಾದಾರ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್. ಷಡಕ್ಷರಪ್ಪ ಸೇರಿದಂತೆ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.