ಕನ್ನಡಪ್ರಭ ವಾರ್ತೆ, ಮುಂಡರಗಿ, ಆ .5
ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮುಂಡರಗಿ ತಾಲೂಕಿನ ಮುರುಡಿ ಗ್ರಾಮದ ಪ್ರಸಿದ್ಧ ಕೆರೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ರು. 1 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಮಂಗಳವಾರ ಮುಂಡರಗಿ ತಾಲೂಕಿನ ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮುರುಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂಡರಗಿ, ಸರ್ಕಾರಿ ಪ್ರೌಢಶಾಲೆ ಮುರುಡಿ ಸಂಯುಕ್ತವಾಗಿ ಸಂಘಟಿಸಿದ್ದ ಶಿಂಗಟಾಲೂರು ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಾರೋಗೇರಿ- ಮುರುಡಿ ರಸ್ತೆ ಅಭಿವೃದ್ಧಿಗಾಗಿ 1.25 ಕೋಟಿ ಹಾಗೂ ಇತರೆ ಅವಶ್ಯ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ತರುವ ಮೂಲಕ ರೋಣ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಸರ್ಕಾರ ಪ್ರತಿ 5 ಕಿಲೋ ಮೀಟರ್‌ಗೊಂದು ಸರ್ಕಾರಿ ಪ್ರೌಢಶಾಲೆ, ಪ್ರತಿ 11 ಕಿ.ಮೀ.ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ತೆರೆಯಲು ನಿರ್ಧರಿಸಿದೆ. ಕ್ರೀಡಾ ಧ್ವಜಾರೋಹಣ ನೆರವೇರಿಸಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕ್ರೀಡೆಯಿಂದ ಸದಾ ಆರೋಗ್ಯವಂತರಾಗಿರಲು ಸಾಧ್ಯ. ಸರ್ಕಾರ ಇತ್ತೀಚಿಗೆ ಎಲ್ಲ ಶಾಲೆಗಳಿಗೂ ಆಟದ ಮೈದಾನಗಳನ್ನು ಮಂಜೂರು ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಹೆಚ್ಚು ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಗ್ರೂಪ್, ವಲಯ, ತಾಲೂಕು, ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕೀರ್ತಿಯನ್ನು ತರಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಹೇಮಗಿರೀಶ ಹಾವಿನಾಳ ಕ್ರೀಡಾ ಜ್ಯೋತಿ ಬರಮಾಡಿಕೊಂಡು ಮಾತನಾಡಿದರು. ತಾಪಂ ಉಪಾಧ್ಯಕ್ಷ ರಾಜಶೇಖರ ರಾಠೋಡ, ಗ್ರಾಪಂ ಅಧ್ಯಕ್ಷ ಲಕ್ಷ್ಮವ್ವ ಕೆಂಪ್ಲ, ಪರಶುರಾಮ ರಾಠೋಡ, ಹನಮವ್ವ ಹಳ್ಳಿ, ವಸಂತ ಮಾಳಗಿಮನಿ, ಸುರೇಶ ಮಾಳಗಿಮನಿ, ಶಾರವ್ವ ಹಳ್ಳಿ, ಭೀಮರಡ್ಡಿ ರಾಜೂರ, ಫಕ್ಕೀರಪ್ಪ ನಾಯಕ್, ತಾಪಂ ಇಓ ಡಿ. ಮೋಹನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಿಇಒ ಎಂ.ಎ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಲೀಲಾವತಿ ಸ್ವಾಗತಿ, ವಂದಿಸಿದರು. ಕ್ರೀಡಾಕೂಟದಲ್ಲಿ 9 ಪ್ರೌಢಶಾಲೆ ವಿದ್ಯಾರ್ಥಿಗಳು ಇದ್ದರು.