ಕನ್ನಡಪ್ರಭ ವಾರ್ತೆ, ಗದಗ, ಆ. 6
ರಾಜ್ಯದಲ್ಲಿ ತೆರೆದ ಕೊಳವೆಬಾವಿ ಅವಾಂತರ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಬಾರಿ ಗಂಭೀರ ಕ್ರಮಕ್ಕೆ ಮುಂದಾಗಿದ್ದು, ಆ. 30ರೊಳಗೆ ಎಲ್ಲ ಜಿಲ್ಲೆಗಳಲ್ಲಿರುವ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸಬೇಕು. ಕೊಳವೆಬಾವಿ ಮುಚ್ಚಿರುವ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸರ್ಕಾರ ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಆದೇಶ ಹೊರಡಿಸಿದೆ.
ಆ. 4ರಂದು ಆದೇಶ: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಮಗು ತೆರೆದ ಕೊಳವೆಬಾವಿಯಲ್ಲಿ ಬಿದ್ದು ಇಂದಿಗೂ ಕಾರ್ಯಾಚರಣೆ ಮುಂದುವರಿದ್ದು, ಆ. 4ರಂದು ಗದಗ ಸೇರಿದಂತೆ ಉತ್ತರ ಕರ್ನಾಟಕದ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳುವುದು ಎಂದು ತಿಳಿಸಿದ್ದರು. ಅಂದೇ ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸಲು ಆದೇಶಿಸಿದ್ದು, ಆದೇಶ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಇದಕ್ಕೆ ಆ. 30ರ ವರೆಗೆ ಗಡುವು ನೀಡಲಾಗಿದೆ.
ಯಾವುದೇ ಸ್ಪಷ್ಟನೆ ಇಲ್ಲ: ಸರ್ಕಾರ ಹೊರಡಿಸಿರುವ ಆದೇಶದಲ್ಲಿ ರಾಜ್ಯದ ಎಲ್ಲ ಜಿಪಂ ಸಿಇಒ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಈಗಾಗಲೇ ವರದಿಯಾಗಿರುವ ಬಹುತೇಕ ತೆರೆದ ಕೊಳವೆಬಾವಿಗಳಲ್ಲಿ ಬಿದ್ದ ಮಕ್ಕಳ ಪ್ರಕರಣದಲ್ಲಿ ಖಾಸಗಿ (ಸ್ವಂತ ಮಾಲೀಕತ್ವದ) ಜಮೀನುಗಳಲ್ಲಿ ಕೊರೆಸಿದ ಕೊಳವೆಬಾವಿಗಳೆ ಹೆಚ್ಚಾಗಿವೆ. ಸರ್ಕಾರದ ಈ ಆದೇಶ ಪ್ರತಿಯಲ್ಲಿ ಯಾವ ತೆರೆದ ಕೊಳವೆಬಾವಿಗಳನ್ನು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸರ್ಕಾರ ಜಿಪಂಗಳ ಮೂಲಕ ಸಾರ್ವಜನಿಕರ ಕುಡಿವ ನೀರಿಗೆ ಕೊರೆಸಿದ ಕೊಳವೆಬಾವಿಗಳಿಗೆ ಮಾತ್ರ ಅನ್ವಯವಾದರೆ ಇದೇನು ಹೊಸ ಆದೇಶವಲ್ಲ. ಈ ಹಿಂದೆಯೂ ಸರ್ಕಾರ ಇಂತಹ ಆದೇಶ ಮಾಡಿತ್ತು.
ಸಿದ್ಧ ಉತ್ತರ: ಇಲಾಖೆ ಆ. 30ರೊಳಗೆ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಜಿಪಂ ಸಿಇಒಗಳು ಈ ಹಿಂದೆ ನೀಡಿದಂತೆ ಈ ಬಾರಿಯೂ ಸಿದ್ಧ ಉತ್ತರವನ್ನೇ ನೀಡುತ್ತಾರೆ. ನಮ್ಮ ಇಲಾಖೆ ಅಡಿಯಲ್ಲಿ ಕುಡಿವ ನೀರಿಗಾಗಿ ಕೊರೆಸಿದ ವೇಳೆಯಲ್ಲಿ ನೀರು ಬರದ ಕೊಳವೆಬಾವಿಗಳನ್ನು ಮುಚ್ಚಿಸಲಾಗಿದೆ. ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಾಪಂ ಇಒಗಳು ಹಾಗೂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎನ್ನುವ ಸಿದ್ಧ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಾರೆ.
- ಶಿವಕುಮಾರ ಕುಷ್ಟಗಿ