ಕನ್ನಡಪ್ರಭ ವಾರ್ತೆ, ಶಿರಸಿ, ಆ. 6
ಮಲೆನಾಡಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಳೆಯಿಂದಾಗಿ ವರದಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಘಟ್ಟದ ಮೇಲಿನ ತಾಲೂಕುಗಳ ಹಳ್ಳ-ಕೊಳ್ಳ-ನದಿಗಳು ತುಂಬಿ ಹರಿಯುತ್ತಿವೆ.
ತಿಂಗಳಿನಿಂದ ಮಳೆ ಚೆನ್ನಾಗಿ ಸುರಿಯುತ್ತಿದೆ. ಇದರಿಂದಾಗಿ ಎತ್ತ ನೋಡಿದರತ್ತ ನೀರು ಎನ್ನುವಂತಾಗಿದೆ. ವರದಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಹದಿನೈದು ದಿನಗಳು ಕಳೆದಿದೆ. ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲ್ಮಲಾ ನದಿ ತುಂಬಿ ಹರಿಯುತ್ತಿದೆ. ಬೇಡ್ತಿ ನದಿಯಲ್ಲಿಯೂ ಸಾಕಷ್ಟು ನೀರು ಹರಿದುಬರುತ್ತಿದೆ. ಕಾಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಕಾರಣ ಕೊಡಸಳ್ಳಿ, ಸೂಪಾ ಸೇರಿದಂತೆ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಎಡಬಿಡದೇ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ.
ಶಿರಸಿ ತಾಲೂಕಿನಾದ್ಯಂತ 24 ಗಂಟೆಗಳಲ್ಲಿ 70.5 ಮಿಮೀ ಮಳೆಯಾಗಿದ್ದು, ಇಲ್ಲಿ ವರೆಗೆ 1924 ಮಿಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಮಳೆ ಕೊರತೆಯಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 81.8 ಮಿಮೀ ಮಳೆ ಸುರಿದಿದ್ದು, ಒಟ್ಟು 2668.6 ಮಿಮೀ ಮಳೆ ಸುರಿದಿದೆ. ಕಳೆದ ವರ್ಷಕ್ಕಿ ಶೇ. 10ರಷ್ಟು ಕಡಿಮೆ ಮಳೆಯಾಗಿದೆ.
ಯಲ್ಲಾಪುರದಲ್ಲಿ 97 ಮಿಮೀ ಮಳೆ ಸುರಿದಿದ್ದು, ಒಟ್ಟು 1943.8 ಮಿಮೀ ಮಳೆ ಸುರಿದಿದೆ. ಕಳೆದಕ್ಕಿಂತ ಶೇ. 15ರಷ್ಟು ಮಳೆ ಕೊರತೆ ಕಾಣಿಸಿದೆ. ಮುಂಡಗೋಡ ತಾಲೂಕಿನಲ್ಲಿ 18.6 ಮಿಮೀ ಮಳೆಯಾಗಿದೆ. ಒಟ್ಟು 715.7 ಮಿಮೀ ಮಳೆ ಸುರಿದಿದೆ. ಕಳೆದ ವರ್ಷಕ್ಕಿಂತ ಶೇ. 20ರಷ್ಟು ಮಳೆ ಕೊರತೆಯಾಗಿದೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು: ಶಿರಸಿ ನಗರದ ತಗ್ಗು ಪ್ರದೇಶಗಳಾದ ದುಂಡಸಿನಗರ, ಮರಾಠಿಕೊಪ್ಪದ ಕೆಲ ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಸ್ಥಳೀಯ ನಿವಾಸಿಗಳು ಮನೆಯಿಂದ ಹೊರ ಬರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮಳೆಯಿಂದಾಗಿ ಅಡಕೆ ಮರಗಳಿಗೆ ಕೊಳೆ ಮದ್ದು ಹೊಡೆಸುವ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಮಳೆಯ ಅಬ್ಬರಕ್ಕೆ ಅಡಕೆ ಮರಗಳು ಜಾರುತ್ತಿದ್ದು, ಕೊನೆ ಗೌಡರು ಮರವೇರಲು ನಿರಾಕರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ರಸ್ತೆ ಪಕ್ಕದಲ್ಲಿ ಭೂ ಕುಸಿತವಾದ ವರದಿಯಾಗಿದೆ. ತಾಲೂಕಿನ ಪೂರ್ವ ಭಾಗದಲ್ಲಿ ವರದಾ ನದಿ ಉಕ್ಕೇರಿ ಹರಿಯುತ್ತಿದೆ. ಇದರಿಂದಾಗಿ 1100 ಎಕರೆ ಬತ್ತ, ಶುಂಠಿ, ಅನಾನಸು, ಬಾಳೆ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿವೆ. ಬನವಾಸಿಯಿಂದ ಅಜ್ಜರಣಿ, ಭಾಶಿ, ಮೊಗವಳ್ಳಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸಿದ್ದಾಪುರ ತಾಲೂಕಿನಲ್ಲಿಯೂ ಮಳೆ ಅಬ್ಬರಿಸುತ್ತಿದ್ದು ಅಘನಾಶಿನಿ ನದಿಯಲ್ಲಿ ಮತ್ತೊಮ್ಮೆ ಪ್ರವಾಹ ಕಾಣಿಸಿಕೊಂಡಿದೆ. ನದಿಯ ಇಕ್ಕೆಲಗಳಲ್ಲಿರುವ ಜಮೀನಿಗೆ ನೀರು ನುಗ್ಗಿರುವ ವರದಿಯಾಗಿದೆ. ಅಘನಾಶಿನಿ ನದಿಯ ಉಪ ನದಿಗಳೂ ಉಕ್ಕಿ ಹರಿಯುತ್ತಿವೆ. ಕಾನಸೂರು-ಬಾಳೇಸರ ಮಾರ್ಗದಲ್ಲಿ ಶಿರಸಿ-ಬಾಳೇಸರ ಬಸ್ ಸಿಲುಕಿರುವ ಕಾರಣ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಸಿದ್ದಾಪುರ-ಸಾಗರ ರಸ್ತೆಯ ಗಡಿ ಪ್ರದೇಶದಲ್ಲಿ ವರದಾ ನದಿಯ ಉಪನದಿಯಾದ ಕನ್ನಹೊಳೆಗೆ ಪ್ರವಾಹ ಬಂದಿದ್ದು ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ, ಸಾಗರ-ಸಿದ್ದಾಪುರ ಸಂಚಾರ ಅಸ್ತವ್ಯಸ್ತಗೊಂಡಿದೆ.