ಕನ್ನಡಪ್ರಭ ವಾರ್ತೆ, ಗದಗ, ಜ. 21
ಜಿಲ್ಲೆಯಲ್ಲಿ ಮಳೆಯ ಚೆಲ್ಲಾಟ ಮುಂದುವರಿದ್ದು, ಕೆಲ ಭಾಗದಲ್ಲಿ ಭರ್ಜರಿ ಕೃಷಿ ಚಟುವಟಿಕೆ ಶುರುವಾಗಿದ್ದರೆ, ಇನ್ನುಳಿದ ಭಾಗದಲ್ಲಿ ಬರದ ಛಾಯೆಆವರಿಸಿದೆ.
ತಾಲೂಕಿನ ಮುಳಗುಂದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಹಾಗೂ ಲಕ್ಷ್ಮೇಶ್ವರ ಹೋಬಳಿಯ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಹೆಸರು, ತೊಗರಿ, ಬಿ.ಟಿ. ಹತ್ತಿ ಬೆಳೆಗಳು ಉತ್ತಮವಾಗಿವೆ. ರೈತರು ಬೆಳೆಗಳಿಗೆ ಎಡೆ ಹೊಡೆಯುವ ಕಾಯಕದಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವೆಡೆ ಹೆಸರು ಬೆಳೆಗೆ ಸೀರು ಬಾಧೆ ಕಾಡಲಾರಂಭಿಸಿದ್ದು, ಹತೋಟಿಗಾಗಿ ಔಷಧಿ ಸಿಂಪರಣೆಯಲ್ಲಿ ತೊಡಗಿದ್ದಾರೆ.
ರೋಣ ಮತ್ತು ನರಗುಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇಂದಿಗೂ ಮಳೆ ಕೊರತೆ ತೀವ್ರವಾಗಿದ್ದು, ರೈತರು ಮುಂಗಾರು ಬಿತ್ತನೆಗಾಗಿ ಕಾಯುತ್ತಿದ್ದಾರೆ. ಜತೆಗೆ ತೇವಾಂಶವನ್ನು ನಂಬಿ ಬಿತ್ತನೆ ಮಾಡಿರುವ ರೈತರ ಬೆಳೆಗಳು ಅಲ್ಲಿಯೇ ಹಾಳಾಗಿವೆ. ಇನ್ನು ಒಣ ಮಣ್ಣಿನಲ್ಲಿಯೇ ಬಿತ್ತನೆ ಮಾಡಿರುವ ರೈತರಿಗೆ ಆಗಾಗ್ಗೆ ಬರುವ ತುಂತುರು ಮಳೆಯಿಂದಾಗಿ ಭೂಮಿಯಲ್ಲಿನ ಬೀಜಗಳು ಮೊಳಕೆ ಒಡೆಯುವಷ್ಟು ತೇವಾಂಶವೂ ಇಲ್ಲದೇ, ಒಣ ಬೀಜ ಹಾಳಾಗಿದು, ರೈತರು ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ವಿವರ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ 1 ಲಕ್ಷ 75 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು, ಆದರೆ ಇದುವರೆಗೂ ಕೇವಲ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಅದು ಕೇವಲ 2 ಹೋಬಳಿಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಬಿತ್ತನೆಯಾಗಿದ್ದು, 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ರೈತರು ಬಿತ್ತನೆಗಾಗಿ ಕಾಯುತ್ತಿದ್ದಾರೆ. ಇನ್ನು ಕೊಳವೆಬಾವಿ ನೀರಾವರಿ ಆಧರಿಸಿ ಬಿತ್ತನೆಯಾಗಿರುವ ಬೆಳೆಗಳಿಗೆ ರೋಣ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಜಿಂಕೆಗಳ ಹಾವಳಿಯೂ ಅತಿಯಾಗಿದ್ದು, ಕೃಷಿಯನ್ನೇ ಬಿಟ್ಟು ಬಿಡಬೇಕು ಎನ್ನುವ ಮಟ್ಟಿಗೆ ಬೇಸರವಾಗುತ್ತಿದೆ.
ಒಂದೇ ಭಾಗ ಗಮನಿಸಬೇಡಿ
ಜಿಲ್ಲೆಯ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಅಲ್ಲಿ ಬೆಳೆಗಳು ಕೊಂಚ ನೆಮ್ಮದಿ ತರುವ ರೀತಿಯಲ್ಲಿವೆ. ಅದು ಆ ಭಾಗದ ರೈತರು ಮಾಡಿದ ಪುಣ್ಯವೆಂದೇ ನಾವು ಭಾವಿಸುತ್ತೇವೆ. ಆದರೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುವ ವೇಳೆಯಲ್ಲಿ ಜಿಲ್ಲೆಯ ಸಂಪೂರ್ಣ ಚಿತ್ರಣವನ್ನು ಪಡೆದುಕೊಂಡು ವರದಿ ನೀಡಬೇಕು.
ಕೇವಲ ಆ ಭಾಗದಲ್ಲಿನ ಬಿತ್ತನೆ ಪ್ರಮಾಣವನ್ನು ತಿಳಿಸಿದಲ್ಲಿ ಜಿಲ್ಲೆಯ ಇನ್ನುಳಿದ ರೈತರಿಗೆ ತೀವ್ರ ಅನ್ಯಾಯವಾಗಲಿದೆ ಎನ್ನುವುದು ಹಿರಿಯ ರೈತರ ಅಭಿಪ್ರಾಯವಾಗಿದೆ.
-ಶಿವಕುಮಾರ ಕುಷ್ಟಗಿ