ಗುಲ್ಬರ್ಗ: ಕಾರ್ಮಿಕರ ಶೋಷಣೆ ವಿರುದ್ಧ ದೇಶದಾದ್ಯಂತ ಫೆ.20ರಿಂದ ಆರಂಭವಾಗಿರುವ 48 ಗಂಟೆಗಳ ಮುಷ್ಕರಕ್ಕೆ ನಗರ ಹಾಗೂ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ.
ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರಿಂದ 2 ದಿನಗಳ ಮುಷ್ಕರದ ಮುನ್ನಾದಿನವಾದ ಫೆ.19ರಂದು ಸಾರಿಗೆ ಸಂಸ್ಥೆ ಬಸ್ಗಳ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲಾಡಳಿತದ ಘೋಷಣೆಯಂತೆ ಶಾಲೆ-ಕಾಲೇಜುಗಳು ರಜೆ ಘೋಷಿಸಿದ್ದವು. ಆದರೆ ನಗರದಲ್ಲಿ ಆಟೋ ಸಂಚಾರ ಎಂದಿನಂತೆ ಕಂಡುಬಂತು. ಸೂಪರ್ ಮಾರ್ಕೆಟ್ ವಹಿವಾಟು ಮಧ್ಯಾಹ್ನ 3 ಗಂಟೆವರೆಗೂ ಬಂದ್ ಆಗಿತ್ತು. ಪ್ರಮುಖ ಹೋಟೆಲ್ಗಳು ಬಾಗಿಲು ಮುಚ್ಚಿದ್ದವು.
ನಗರದ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ಗಳು ಕಾರ್ಯ ನಿರ್ವಹಿಸಲಿಲ್ಲ. ಸಿನಿಮಾ ಹಾಲ್ ಬೆಳಗಿನ ಷೋ ರದ್ದುಪಡಿಸಿದ್ದವು. ಎಲ್ಐಸಿ, ಬ್ಯಾಂಕ್ ಸಿಬ್ಬಂದಿ ಸಂಘಟನೆಗಳು ಬಂದ್ಗೆ ಬೆಂಬಲಿಸಿದ್ದರೂ ಮುಷ್ಕರದ ಮೊದಲ ದಿನ ಕಾರ್ಯ ನಿರ್ವಹಿಸಿದ್ದು ಕಂಡುಬಂತು. ಆದಾಗ್ಯೂ ಈ ಸಂಘಟನೆಗಳ ಅನೇಕ ಪ್ರಮುಖರು ಕಾರ್ಮಿಕ ಮುಷ್ಕರದೊಂದಿಗೆ ಇದ್ದರು.
ಬೆಳಗ್ಗೆಯಿಂದಲೇ ರ್ಯಾಲಿ: ಕಾರ್ಮಿಕ ಹೋರಾಟಗಾರ ಎಸ್.ಕೆ. ಕಾಂತಾ, ಮಾರುತಿ ಮಾನ್ಪಡೆ, ಶೌಕತ್ ಅಲಿ ಆಲೂರ್, ಸೋಮಶೇಖರ ಯಾದಗಿರಿ ಸೇರಿದಂತೆ ನೂರಾರು ನಾಯಕರು, ಕಾರ್ಮಿಕರು ಸೇರಿಕೊಂಡು ಬೆಳಗ್ಗೆಯಿಂದಲೇ ಕೇಂದ್ರ ಬಸ್ ನಿಲ್ದಾಣದಿಂದ ರ್ಯಾಲಿ ಆರಂಭಿಸಿದರು. ಇವರಿಗೆ ಬೆಂಬಲವಾಗಿ ಯುವ ಕಾರ್ಯಕರ್ತರು ಬಹುಸಂಖ್ಯೆಯಲ್ಲಿ ಜಮಾಯಿಸಿ ಈ ನಾಯಕರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಮುನ್ನಾದಿನ ಪಂಜಿನ ಮೆರವಣಿಗೆ ನಡೆಸಿ ಜನಮನ ಸೆಳೆದಿದ್ದ ಕಾರ್ಯಕರ್ತರು, ಮುಷ್ಕರದ ಮೊದಲ ದಿನ ನಡೆಸಿದ್ದ ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಕೆಲಕಾಲ ಅಡಚಣೆ ತಂದೊಡ್ಡಿತ್ತು.
ಸ್ಪಂದನೆ ಅಷ್ಟಕ್ಕಷ್ಟೆ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಸರೆಯಲ್ಲಿ ಗುಲ್ಬರ್ಗದಲ್ಲಿ ಮುಷ್ಕರ ನಡೆಯುತ್ತಿದೆ. ಕಾರ್ಮಿಕರ ಶೋಷಣೆ, ಬೇಡಿಕೆಗಳ ವಿಚಾರವಾಗಿ ಘೋಷಣೆಗಳನ್ನು ಕೂಗುತ್ತ 48 ಗಂಟೆಗಳ ಕಾರ್ಮಿಕರ ಮುಷ್ಕರಕ್ಕೆ ಸಹಕರಿಸುವಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಕಾರ್ಮಿಕ ಸಂಘಟನೆಗಳು ಕೋರಿಕೊಂಡಿದ್ದರೂ ಈ ಕೋರಿಕೆಗೆ ದೊರೆತ ಸ್ಪಂದನೆ ಅಷ್ಟಕ್ಕಷ್ಟೆ ಎಂಬಂತಿತ್ತು.
ಮೆರವಣಿಗೆಯಲ್ಲಿ ಕಾರ್ಮಿಕ ಮುಖಂಡರಾದ ಶೌಕತ್ ಅಲಿ ಆಲೂರ್, ಗಂಗಮ್ಮ ಬಿರಾದಾರ, ಮೌಲಾ ಮುಲ್ಲಾ, ಮಾರುತಿ ಮಾನ್ಪಡೆ ಸೇರಿದಂತೆ ಅನೇಕರು ಸೂಪರ್ ಮಾರ್ಕೆಟ್, ಬಸ್, ರೈಲು ನಿಲ್ದಾಣಗಳಲ್ಲಿ, ಬೀದಿ ಬದಿಯಲ್ಲೇ ಗುಂಪು ಚರ್ಚೆಗಳನ್ನು ಮಾಡುತ್ತ ರ್ಯಾಲಿಗಳಲ್ಲಿ ತೆರಳಿ ಬಂದ್ ಕಾವೇರುವಂತೆ ಯತ್ನಿಸಿದರು.
ಬೈಕ್ ರ್ಯಾಲಿ: ಬೈಕ್ ರ್ಯಾಲಿ ಸರ್ದಾರ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವಿಕಾಸ ಭವನ ಅಂಗಳ ತಲುಪಿ ಸಾರ್ವಜನಿಕ ಸಭೆಯಾಗಿ ಪರಿವರ್ತಿತವಾಯಿತು. ಇಲ್ಲಿ ಮಾತನಾಡಿದ ಎಸ್.ಕೆ. ಕಾಂತಾ, ಮಾರುತಿ ಮಾನ್ಪಡೆ, ಶೌಕತ್ ಅಲಿ ಆಲೂರ್ ಮೊದಲಾದ ಅನೇಕ ಕಾರ್ಮಿಕ ನಾಯಕರು ಕಾರ್ಮಿಕರ ಶೋಷಣೆ ವಿರುದ್ಧ ಈ ಹೋರಾಟ ಅನಿವಾರ್ಯ ಎಂದು ಹೇಳುವ ಮೂಲಕ ಸಾರ್ವಜನಿಕರು ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸುವಂತೆ ಕೋರಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಪರವಾಗಿ ಸದಸ್ಯರು ನಗರದಾದ್ಯಂತ ಸಂಚರಿಸಿ ಪ್ರಮುಖ ಪ್ರದೇಶಗಳಲ್ಲಿ ಬಂದ್ ಸಂಪೂರ್ಣವಾಗಿರುವಂತೆ ನೋಡಿಕೊಂಡರು. ಬೆಳಗ್ಗೆ 7ರಿಂದ 11ರವರೆಗೆ ಬೈಕ್ ರ್ಯಾಲಿ, ನಂತರ ಸರ್ದಾರ್ ವೃತ್ತ, ಸೂಪರ್ ಮಾರ್ಕೆಟ್, ಚಪ್ಪಲ್ ಬಜಾರ್, ಚೌಕವರೆಗೆ ಪಾದಯಾತ್ರೆ. ಕಾರ್ಮಿಕ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿಯವೆರಗೂ ಪಾದಯಾತ್ರೆ ನಡೆಸಿದವು. ರೇಲ್ವೆ ಮಜದೂರ್ ಯೂನಿಯನ್ ಕಚೇರಿಯಿಂದ ಈ ಹೋರಾಟ ಆರಂಭವಾಗಿ ವಿಕಾಸ ಭವನದಲ್ಲಿ ಕೊನೆಗೊಂಡಿತು.
ಸಂಘಟನೆಗಳ ಬೆಂಬಲ: ಎಂ.ಬಿ. ಸಜ್ಜನ, ಮಂಜೂರ ಪಟೇಲ್, ಸೋಮಶೇಖರ ಯಾದಗಿರಿ, ಶಾಂತಾ ಘಂಟಿ, ಬಸವರಾಜ, ಗೌರಮ್ಮ ಪಾಟೀಲ್, ಸಂಜು ದೇಶಪಾಂಡೆ, ಅಯ್ಯಪ್ಪ, ಅಷ್ಪಾಕ್, ಚಂದ್ರಕಾಂತ ಗದ್ದುಗೆ, ಮಹಾವೀರ ಕಾಸರ್ ಸೇರಿದಂತೆ ಸಾರಿಗೆ ಸಂಸ್ಥೆಗಳ ಸಂಘಟನೆಗಳ ಮುಖಂಡರು, ಎಲ್ಐಸಿ, ಬ್ಯಾಂಕ್ ಸಂಘಗಳ ಮುಖಂಡರು, ಅಂಚೆ ಸಿಬ್ಬಂದಿ ಸಂಘಟನೆಯವರು ಸೇರಿದಂತೆ ನೂರಾರು ಮಂದಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಎಚ್ಕೆಸಿಸಿಐ, ವಿವಿ ಶಿಕ್ಷಕರ ಸಂಘಟನೆ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿವೆ.
ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮುಷ್ಕರ ಸಂಪೂರ್ಣ ಶಾಂತಿಯಿಂದ ಕೂಡಿತ್ತು, ನಗರ ಹಾಗೂ ದೂರದೂರುಗಳಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ಬಸ್ಸುಗಳಿಲ್ಲದೆ ಪ್ರಯಾಣಿಕರು ಬವಣೆ ಪಟ್ಟರು.