ಯಾದಗಿರಿ: ಎನ್ಜಿಒಗಳಿಗೆ ಕಿರುಕುಳ ನೀಡುತ್ತಿರುವ ಬಾಲ ಕಾರ್ಮಿಕ ಇಲಾಖೆ ಜಿಲ್ಲಾ ಯೋಜನಾ ನಿರ್ದೇಶಕ ರಘುವೀರಸಿಂಗ್ ರಾಠೋಡ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಜನ ಶಕ್ತಿ ವೇದಿಕೆ ಅಧ್ಯಕ್ಷ ಡಾ.ಎನ್.ವಿ ವಾರದ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಕಳೆದ ವರ್ಷ ಬಾಲ ಕಾರ್ಮಿಕ ಶಾಲೆ ನಡೆಸಲು ಅರ್ಜಿ ಕರೆದಾಗ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಹಿಂದಿನ ಜಿಲ್ಲಾಧಿಕಾರಿ 18 ಬಾಲ ಕಾರ್ಮಿಕ ಶಾಲೆಯನ್ನು ಮಂಜೂರು ಮಾಡಿದ್ದರು. ಆ ಶಾಲೆಗಳನ್ನು ನಡೆಸಲು ಸರ್ಕಾರೇತರ ಸಂಸ್ಥೆಗಳನ್ನು ಆಯ್ಕೆ ಮಾಡುವಲ್ಲಿ ಬಾಲ ಕಾರ್ಮಿಕ ಇಲಾಖೆ ಯೋಜನೆ ನಿರ್ದೇಶಕರ ಕೈವಾಡವಿದೆ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಗಮನಕ್ಕೆ ಈ ವಿಷಯ ತರಲಾಗಿತ್ತು. ಮುಂದಿನ ವರ್ಷದಲ್ಲಿ ಇನ್ನುಳಿದ ಎನ್ಜಿಒಗಳಿಗೆ ಅವಕಾಶ ನೀಡುವುದಾಗಿ ಅವರು ಭರವೆಸೆ ನೀಡಿದ್ದರು. ಯೋಜನಾ ನಿರ್ದೇಶಕರ ಕಾರ್ಯವೈಖರಿಯಿಂದ ಎನ್ಜಿಒಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಡಾ. ವಾರದ್ ಒತ್ತಾಯಿಸಿದ್ದಾರೆ.2012ರಲ್ಲಿರಲ್ಲಿ ಆಯ್ಕೆಯಾದ ಎನ್ಜಿಒಗಳನ್ನು ನವೀಕರಣಗೊಳಿಸದೇ ಹೊಸ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದಾರೆ.
ಜೆಡಿಎಸ್ನಿಂದ ಅಲ್ಪ
ಸಂಖ್ಯಾತರಿಗೆ ಮನ್ನಣೆ
ಯಾದಗಿರಿ: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ ಮನ್ನಣೆ ನೀಡಿದೆ ಎಂದು ಜೆಡಿಎಸ್ ನಗರ ಅಲ್ಪಸಂಖ್ಯಾತರ ಅಧ್ಯಕ್ಷ ಯಾಖೂಬ್ ಹಜಾರಿ ಹೇಳಿದ್ದಾರೆ. ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಯಾದಗಿರಿ ನಗರಸಭೆ ಚುನಾವಣೆಯಲ್ಲಿ ಈ ಬಾರಿ ಅತಿ ಹೆಚ್ಚು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸುವಲ್ಲಿ ಜೆಡಿಎಸ್ ಹೈದರಾಬಾದ್ ಕರ್ನಾಟಕ ಕೋರ್ ಕಮಿಟಿ ಸದಸ್ಯ ಎ.ಸಿ. ಕಾಡ್ಲೂರು ಶ್ರಮ ವಹಿಸಿದ್ದಾರೆ. ಈ ಪ್ರಾತಿನಿಧ್ಯ ದೊರಕುವಂತಾಗಲು ಜೆಡಿಎಸ್ ಜಿಲ್ಲಾ ಅಧ್ಯಕ್ಷ ನಾಗನಗೌಡ ಕಂದಕೂರು, ಶ್ರೀನಿವಾಸರೆಡ್ಡಿ ಚೆನ್ನೂರು, ಅಜೀಜ್ ಅಹಮ್ಮದ್ ಶೇಹೆನಾ, ಚೆನ್ನಪ್ಪಗೌಡ ಮೋಸಂಬಿ ಕಾರಣೀಕರ್ತರಾಗಿದ್ದಾರೆ. ಆದ್ದರಿಂದ ನಗರದ ಜನತೆ ಜೆಡಿಎಸ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಮಕ್ಕಳಿಗೆ ಲಸಿಕೆ
ಯಾದಗಿರಿ: ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಎರಡನೇ ಸುತ್ತಿನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಒಟ್ಟು 1,36,247 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನ ಮುಕ್ಕಾ ತಿಳಿಸಿದ್ದಾರೆ. ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್ ಹಾಗೂ ಯಾದಗಿರಿ ಕ್ಷೇತ್ರಗಳ ಗ್ರಾಮಾಂತರ ಪ್ರದೇಶದ ಒಟ್ಟು 1,12,709 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ನಗರದ 23538 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಇದಲ್ಲದೇ ಮನೆಮನೆಗೆ ಸಿಬ್ಬಂದಿ ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.