ಜೇವರ್ಗಿ: ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ ದೀನ ದಲಿತರ, ಬಡವ, ಬಲ್ಲಿದವರಿಗೂ ವೇದಿಕೆ ಕಲ್ಪಿಸುವುದರ ಜೊತೆಗೆ ಕಾಯಕ ಜೀವಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಬಸವಣ್ಣನವರ ಆಚರಣೆ ಜಾರಿಗೆ ತಂದಿದ್ದಾರೆ.
ಕಳೆದ ಗುರುವಾರ ನಡೆದ ಸಮಾಜೋತ್ಸವ ಸಮಾರಂಭದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಏಕಕಾಲದಲ್ಲಿ 50 ಕಾಯಕ ಜೀವಿಗಳ ತುಲಾಭಾರ ಹಾಗೂ ಅನಾಥ ಮಕ್ಕಳಿಗೆ ಉಚಿತ ಬಟ್ಟೆ, ಸಿಹಿ ತಿನಿಸುವುದರೊಂದಿಗೆ ಸೊನ್ನದ ಶಿವಾನಂದ ಸ್ವಾಮಿಜಿ ತಮ್ಮ 50ನೇ ಜನ್ಮ ದಿನವನ್ನು ಆಚರಿಸಿಕೊಂಡರು.
ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಸಿ. ಮನಗೂಳಿ ಉದ್ಘಾಟಿಸಿ ಮಾತನಾಡಿ, ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆದರೆ ಇಂತಹ ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಗಳು ಭಕ್ತರಿಂದ ಸನ್ಮಾನದ ಜೊತೆಗೆ ತುಲಾಭಾರ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಅಪವಾದವಾಗಿ ಸೊನ್ನದ ಶ್ರೀಗಳು ವೈಚಾರಿಕತೆಯಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಮಾಡುವುದರ ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ತುಲಾಭಾರ ಮಾಡಿ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸೊನ್ನ ಶ್ರೀಗಳು ಮಾಡಿದ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಎಂಬ ಗೌರವ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಆಂದೋಲಾದ ಸಿದ್ದಲಿಂಗ ಸ್ವಾಮೀಜಿ, ಶಖಾಪುರದ ಸಿದ್ದರಾಮ ಶಿವಾಚಾರ್ಯರು, ಕುಕನೂರಿನ ಚನ್ನಮಲ್ಲ ದೇವರು, ಜೇರಟಗಿಯ ಮಹಾಂತ ಶಿವಾಚಾರ್ಯರು ಇದ್ದರು.
ಈ ಭಾಗದ ಮಠಾಧೀಶರು, ಅತಿಥಿಗಳಾಗಿ ಶಾಸಕಿ ಅರುಣಾ ಪಾಟೀಲ್ ರೇವೂರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಗುಲ್ಬರ್ಗದ ಸುಲಫಲ ಮಠದ ಮಹಾಂತ ಶಿವಾಚಾರ್ಯರು, ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಹಾರಕೂಡದ ಚೆನ್ನವೀರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಇದ್ದರು.