ಆಳಂದ: ಬಸವಾದಿ ಶರಣರು ಬೋಧಿಸಿದ ಜ್ಞಾನ, ವಿಜ್ಞಾನದ ತತ್ವಗಳನ್ನು ಅರಿತರೆ ಮಾನವನ ಅಜ್ಞಾನ ದೂರವಾಗುತ್ತದೆ ಎಂದು ಬಸವ ಕೇಂದ್ರದ ಹಿರಿಯ ಮುಖಂಡ ಗುಂಡಯ್ಯಸ್ವಾಮಿ ಮುನ್ನೊಳ್ಳಿ ಹೇಳಿದರು.
ತಾಲೂಕಿನ ಮುನ್ನೊಳ್ಳಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ಶುಕ್ರವಾರ ನಾಗರ ಪಂಚಮಿ ನಿಮಿತ್ತ ಏರ್ಪಡಿಸಿದ್ದ ಅಜ್ಞಾನದಿಂದ ವಿಜ್ಞಾನದ ಕಡೆಗೆ ಹೊರ ಬನ್ನಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಬ್ಬ ಹರಿದಿನಗಳು, ಪರಂಪರೆ ಆಚರಣೆಗಳಲ್ಲವೂ ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕೆಂದ ಅವರು, ಕಲ್ಲು ನಾಗರ ಪ್ರತಿಮೆಗೆ ಹಾಲನ್ನೆರೆಯುವ ಬದಲು ಮಕ್ಕಳಿಗೆ ಕುಡಿಸಬೇಕು. ದುಶ್ಚಟಗಳಿಂದ ದೂರವಾಗಿದ್ದು, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ವಚನ ಅಧ್ಯಯನ ಅವಶ್ಯ: ತಡಕಲ್ ಗ್ರಾಮದ ಮುಖಂಡ ಕಲ್ಯಾಣಿ ತುಕಾಣಿ ಮಾತನಾಡಿ, ಶರಣರು ತೋರಿಸಿದ ಅತ್ಯಂತ ಸರಳಮಾರ್ಗವನ್ನು ಅನುಸರಿಸಿದರೆ ಬದಕು ಹಸನಾಗುತ್ತದೆ. ದ್ವಂದ್ವ ಆಚರಣೆ, ಗೊಂದಲ, ಮೂಢನಂಬಿಕೆಗಳಿಂದ ಹೊರ ಬಾರದಿದ್ದಲ್ಲಿ ಜೀವನ ಗೊಂದಲದಿಂದ ಕೂಡಿರುತ್ತದೆ. ಈ ಗೊಂದಲ ಹೋಗಲಾಡಿಸಲು ಶರಣರು ವಚನ ಸಾಹಿತ್ಯವನ್ನು ನೀಡಿದ್ದಾರೆ. ಪ್ರತಿಯೊಬ್ಬರು ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ನಸ್ರೋದ್ದೀನ್ ಗೋಳಾ, ತಡಕಲ್ ಬಸವ ಸಮಿತಿ ಶಾಲೆಯ ಶಿಕ್ಷಕ ನಿಲಕಂಠ ಶಿರೋಳೆ, ಶಂಭುಲಿಂಗಯ್ಯಸ್ವಾಮಿ, ಓಂಕಾರ ವಾಲೆ ಮತ್ತಿತರು ಮಾತನಾಡಿದರು.
ಗ್ರಾಮದ ಪಂಡಿತ ಪೋದ್ದಾರ ರೇವಣಸಿದ್ದಪ್ಪ ಪೂಜಾರಿ, ಶಿವಶರಣಪ್ಪ ಮಾಂಗ್ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು. ವೀರಭದ್ರಪ್ಪ ಬುಜುರ್ಕೆ ಕಾರ್ಯಕ್ರಮ ನಿರೂಪಿಸಿದರು. ಚನ್ನಮಲ್ಲಯ್ಯಸ್ವಾಮಿ ವಂದಿಸಿದರು.