ಗುಲ್ಬರ್ಗ: ಜೇವರ್ಗಿ ತಾಲೂಕಿನ ಕಾಸರಭೋಸಗಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ನೀಡಿರುವ ಹೇಳಿಕೆಯನ್ನು ಶ್ರೀರಾಮ ಸೇನೆ ಗುಲ್ಬರ್ಗ ಮುಖಂಡ ಶಶಿಕಾಂತ ದೀಕ್ಷಿತ್ ಕಟುವಾಗಿ ಖಂಡಿಸಿದ್ದಾರೆ. ಹೇಳಿಕೆ ನೀಡಿರುವ ಅವರು, ಹೆಣ್ಣು ಹೆತ್ತವರಿಗೆ ಕಷ್ಟ ಗೊತ್ತಿರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ತುಂಬ ಹಗುರವಾಗಿ ಮಾತನಾಡಿದ್ದಾರೆ. ಅತ್ಯಾಚಾರವಲ್ಲ, ಅದು ಲೈಂಗಿಕ ಹಲ್ಲೆ... ಎಂದು ತೇಲಿಸಿ ಹೇಳಿಕೆ ನೀಡಿರುವುದು ಇಡೀ ಪ್ರಕರಣದಲ್ಲಿ ಅವರು ಯಾರನ್ನೋ ರಕ್ಷಿಸಲು ಹೊರಟಂತಿದೆ ಎಂದು ಹೇಳಿಕೆಯಲ್ಲಿ ಸಚಿವರ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಅತ್ಯಾಚಾರ ಅಮಾನವೀಯ, ಇಂತಹ ಕೆಲಸದಲ್ಲಿ ಯಾವುದೇ ಜಾತಿ ಮತ ಹಿನ್ನೆಲೆಯಾಗಿಟ್ಟುಕೊಂಡು ಯಾರೂ ಹೇಳಿಕೆ ಕೊಡಬಾರದು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಹೇಳಿಕೆ ನೀಡುವ ಮೂಲಕ ಅನಗತ್ಯವಾಗಿ ಅತ್ಯಾಚಾರ ಪ್ರಕರಣದಲ್ಲಿ ಮೂಗು ತೂರಿಸಿದಂತಿದೆ. ಇಂತಹ ಉಸ್ತುವಾರಿ ಸಚಿವರು ಬೇಡವೇ ಬೇಡ ಎಂದು ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. ಲಿಂಗಾರೆಡ್ಡಿ, ಗೋಪಾಲಕೃಷ್ಣ, ಗುರು ನರೋಣಾ, ನಿಖಿಲ್ ಕುಲ್ಕರ್ಣಿ, ಸಿದ್ದು ಹಿರೇಮಠ ಯಾದಗಿರಿ, ಶಿವಾನಂದ ಗಲಸಮನಿ ಶ್ರೀರಾಮ ಸೇನೆ ಮುಖಂಡರ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ