ವಿಶೇಷ ವರದಿ
ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಶುರುವಾಗಿ ಹೆಚ್ಚು ಕಮ್ಮಿ ಒಂದು ತಿಂಗಳೇ ಕಳೆದಿದೆ. ಕೆಲವೆಡೆ ಬತ್ತದ ನಾಟಿ ಶುರುವಾಗಿದ್ದರೆ, ಇನ್ನೂ ಹಲವೆಡೆ ನಾಟಿ ತೀವ್ರವಾಗಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿರುವುದಂತೂ ಸುಳ್ಳಲ್ಲ. ರೈತರು ನೆರೆ ಜಿಲ್ಲೆಯಿಂದ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮಳೆ ಸ್ವಲ್ಪ ತಡವಾದ್ದರಿಂದ ಹೆಸರು ಬೆಳೆಯಲ್ಲಿ ಕಳೆ ತೆಗೆಯುವುದು ಹಾಗೂ ನಾಟಿ ಒಮ್ಮೆಲೇ ಆರಂಭವಾಗಿ ಎಲ್ಲ ಕೆಲಸಗಳನ್ನು ಮುಗಿಸಬೇಕಿರುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಉಂಟಾಗಿದೆ ಎಂಬುದು ರೈತರ ಅಭಿಮತವಾಗಿದೆ.
ಕೆಲವೆಡೆ ನಾಟಿ ಈಗಷ್ಟೇ ಶುರು: ನಾಟಿ ಆರಂಭವಾಗಿರುವುದರೊಂದಿಗೆ ಮೊದಲ ಮಳೆ ಬಂದಾಗಲೇ ಅಂದರೆ ಸ್ವಲ್ಪ ಮುಂಚಿತವಾಗಿ ಬಿತ್ತನೆ ಮಾಡಿದ್ದ ಫಸಲುಗಳು ಈಗ ಭೂಮಿ ಬಿಟ್ಟು ಮೇಲೇಳುತ್ತಿವೆ. ಹತ್ತಿ ಹಾಗೂ ಹೆಸರು ಪೈರುಗಳು ಚೇತರಿಸಿಕೊಳ್ಳುತ್ತಿದ್ದು, ಅವುಗಳ ಕಳೆ ಕೀಳುವುದೂ ಈಗಲೇ ಆಗಬೇಕಿದೆ. ಎಲ್ಲ ಕೆಲಸಗಳು ಒಮ್ಮೆಲೆ ಬಂದಿರುವುದರಿಂದ ರೈತ ಕೃಷಿ ಕಾರ್ಮಿಕರು ದೊರೆಯದಂತಾಗಿದೆ.
ಶಹಾಪುರ ತಾಲೂಕಿನ ಹತ್ತಿಗುಡೂರು ನಾಯ್ಕಲ್ಗಳಲ್ಲಿ ನಾಟಿ ಆರಂಭವಾಗಿದೆ. ಕೃಷ್ಣಾ ನದಿ ತೀರದ ವಡಗೇರಾ ಭಾಗದಲ್ಲಿ ಚೆನ್ನೂರು, ಬೆಂಡೆಗಂಬಳಿ, ಐಕೂರು, ಹಯ್ಯಾಳ ಕಡೆ ನಾಟಿ ಈಗಷ್ಟೇ ಶುರುವಾಗಿದೆ. ಸುರಪುರ ತಾಲೂಕಿನ ನಾರಾಯಣಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲೂ ನಾಟಿ ಭರದಿಂದ ಆರಂಭವಾಗಿದೆ. ಹುಣಸಗಿ, ಕೆಂಭಾವಿ, ವಜ್ಜಲ್, ದೇವಪುರ, ಯಾದಗಿರಿ ತಾಲೂಕಿನ ಹತ್ತಿಕುಣಿ, ಯರಗೋಳ, ಅರಕೇರಾ ಮತ್ತಿತರ ಕಡೆ ಇನ್ನೂ ನಾಟಿ ಆರಂಭವಾಗಬೇಕಿದೆ.
ನಗರಗಳತ್ತ ವಲಸೆ: ಕೃಷಿಕರೇ ಅಧಿಕವಾಗಿರುವ ಜಿಲ್ಲೆಯಲ್ಲಿ ಮೊದಲೆಲ್ಲ ಕೃಷಿ ಕಾರ್ಮಿಕರ ಕೊರತೆ ಕಂಡು ಬರುತ್ತಿರಲಿಲ್ಲ. ಇಲ್ಲಿ ಮಳೆ-ಬೆಳೆ ಕೊರತೆಯಾಗಿ ವರ್ಷವಿಡೀ ಕೆಲಸವಿಲ್ಲದಾಗಿದ್ದರಿಂದ ಕಾರ್ಮಿಕರು ಪುಣೆ, ಬೆಂಗಳೂರು, ಹೈದರಾಬಾದ್ನಂತಹ ನಗರಗಳಿಗೆ ವಲಸೆ ಹೋಗಿದ್ದಾರೆ. ಇದು ಕಾರ್ಮಿಕರ ಕೊರತೆಗೆ ಕಾರಣವಾಗಿದೆ ಎಂದು ರೈತರು ಹೇಳುತ್ತಾರೆ.
ನಗರಗಳಲ್ಲಿ ದಿನಕ್ಕೆ 150-200 ಕೂಲಿ ದೊರೆಯುತ್ತದೆ. ಸ್ವಲ್ಪ ಚುರುಕಾಗಿದ್ದರಂತೂ ಇನ್ನೂ 50 ಹೆಚ್ಚಾಗಿಯೇ ದೊರೆಯುತ್ತದೆ. ರಾತ್ರಿ ಆ ಸ್ಥಳದಲ್ಲಿ ಮನೆ ನಿರ್ಮಾಣದ ವಸ್ತುಗಳನ್ನು ಕಾಯುವ ಮೂಲಕ ಅಲ್ಲಿಯೇ ಇದ್ದರೆ ಅದರ ಕೂಲಿಯೂ ದೊರೆತು ಹಗಲು-ರಾತ್ರಿ ದುಡಿಮೆಯಾಗುತ್ತದೆ. ಜೊತೆಗೆ ಕೂಲಿಕಾರ್ಮಿಕರೆಲ್ಲ ಒಟ್ಟಾಗಿ ಕಲೆತು ಹೋಗುವುದರಿಂದ ಅಲ್ಲಿ ಎಲ್ಲರಿಗೂ ಕೆಲಸ ಸಿಕ್ಕೇ ಸಿಗುತ್ತದೆ. ಹಾಗಾಗಿ ಈ ಭಾಗದ ಜನ ಸಾವಿರಾರು ಸಂಖ್ಯೆಯಲ್ಲಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ರೈತರಿಗೆ ಹೊರೆ: ಇಲ್ಲಿ ಹೆಚ್ಚೆಂದರೆ 80 ಇಲ್ಲವೇ 100 ಸಿಗುತ್ತದೆ. ಪರಿಸ್ಥಿತಿ ಹೀಗಿರುವಾಗ ನಾವು ಕೊಡುವ ಕೂಲಿಗೆ ಇಲ್ಲಿ ಕಾರ್ಮಿಕರು ಸಿಗುತ್ತಿಲ್ಲ ಎಂದು ಮಲ್ಲಯ್ಯ ಎಂಬ ರೈತ ಹೇಳಿದ್ದು, ಪರಿಸ್ಥಿತಿ ಬಿಡಿಸಿಟ್ಟರು. ರೈತರು ಸುಮಾರು 15-20 ಕಿ.ಮೀ. ದೂರದ ಊರುಗಳಿಂದ ಕೃಷಿ ಕಾರ್ಮಿಕರನ್ನು ಕರೆತರುತ್ತಿದ್ದಾರೆ. ಅವರಿಗೆ ಹೆಚ್ಚಿನ ಕೂಲಿ ಕೊಡಬೇಕು, ಹೋಗಿ ಬರಲು ಸಾರಿಗೆ ವ್ಯವಸ್ಥೆ ಮಾಡುತ್ತಿದ್ದಾರೆ.
ದುಬಾರಿ ಹಣ ತೆತ್ತು ಗೊಬ್ಬರ, ಬಿತ್ತನೆ ಬೀಜದೊಂದಿಗೆ ಕಾರ್ಮಿಕರ ಕೂಲಿ, ಅವರ ಹೋಗಿ ಬರುವ ವೆಚ್ಚವನ್ನೂ ನೋಡಿಕೊಳ್ಳಬೇಕಾದ್ದರಿಂದ ರೈತರಿಗೆ ಹೊರೆಯಾಗುತ್ತಿದೆ. ರೈತರ ಫಸಲಿಗೆ ಉತ್ತಮ ಬೆಲೆ ಸಿಕ್ಕರೆ ಅದು ಸರಿದೂಗೀತು. ಇಲ್ಲವಾದರೆ ಬೇಸಾಯವೇ ಮೈಮೇಲೆ ಬರುವ ದಿನಗಳೂ ದೂರವಿಲ್ಲ.
ಆಗ ರೈತರೂ ಗುಳೇ ಹೋಗಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವೇನಲ್ಲ. ಇದೆಲ್ಲ ಸಣ್ಣ, ಅತಿ ಸಣ್ಣ ರೈತರಿಗೆ ಸಾಧ್ಯವಾಗದೇ ಅವರೆಲ್ಲ ಮಕ್ಕಳು-ಮರಿ ಕಟ್ಟಿಕೊಂಡು ಮನೆಯರೊಟ್ಟಿಗೆ ಹೊಲದಲ್ಲಿ ದುಡಿಯುತ್ತಿರುವುದು ಜಿಲ್ಲೆಯಲ್ಲಿ ಸಾಮಾನ್ಯ.